ಕ್ರೀಡೆಯಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಉತ್ತಮ ಸಾಧನೆ

| Published : Dec 01 2024, 01:33 AM IST

ಸಾರಾಂಶ

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬರುವ 9 ತೋಟಗಾರಿಕೆ ಮಹಾವಿದ್ಯಾಲಯಗಳ ವಿದ್ಯಾಥಿಗಳು ದೇಶದ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ, ಉತ್ತಮ ಸ್ಥಾನ ಗಳಿಸುತ್ತಿದ್ದಾರೆ. ಆಟದಲ್ಲಿ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದ್ದಾರೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಹೇಳಿದರು.

ಮುನಿರಾಬಾದ್‌: ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ 9 ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಓದಿನಲ್ಲಿ ಹಾಗೂ ಕ್ರೀಡೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಹೇಳಿದರು.

ಅವರು ಶನಿವಾರ ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ 15ನೇ ಅಂತರ ಮಹಾವಿದ್ಯಾಲಯಗಳ ಗುಂಪು ಕ್ರೀಡಾಕೂಟ 2024-25 ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ತೋಟಗಾರಿಕೆ ಹಾಗೂ ಕೃಷಿಗೆ ಸಂಬಂಧಪಟ್ಟಂತೆ 75 ವಿಶ್ವವಿದ್ಯಾಲಯಗಳು ಇವೆ. ಯುಜಿಸಿ ಅನುದಾನಿತ 700 ವಿಶ್ವವಿದ್ಯಾಲಯಗಳು ಇವೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬರುವ 9 ತೋಟಗಾರಿಕೆ ಮಹಾವಿದ್ಯಾಲಯಗಳ ವಿದ್ಯಾಥಿಗಳು ದೇಶದ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ, ಉತ್ತಮ ಸ್ಥಾನ ಗಳಿಸುತ್ತಿದ್ದಾರೆ. ಆಟದಲ್ಲಿ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯ ಪ್ರಾರಂಭವಾಗಿ 15 ವರ್ಷಗಳು ಕಳೆದಿವೆ. ಇಷ್ಟು ಅಲ್ಪಾವಧಿಯಲ್ಲಿ ಇಂತಹ ಬೃಹತ್ ಸಾಧನೆ ಮಾಡಿದ್ದು, ಇದರ ಹಿಂದೆ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಮಹತ್ತರ ಪಾತ್ರವಿದೆ. ಅವರ ಶ್ರಮದಿಂದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಒಳ್ಳೆ ಹೆಸರು ಬಂದಿದ್ದು, ಇಡೀ ದೇಶದ ವಿಶ್ವವಿದ್ಯಾಲಯಗಳು ನಮ್ಮ ವಿಶ್ವವಿದ್ಯಾಲಯದತ್ತ ಮುಖ ಮಾಡಿ ನೋಡುವಂತೆ ಆಗಿದೆ ಎಂದರು. ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ಮಾತನಾಡಿ, ಕ್ರೀಡೆಯಿಂದ ಮನುಷ್ಯನ ಆರೋಗ್ಯ ಸದೃಢವಾಗುತ್ತದೆ. ಕ್ರೀಡೆಗಳು ವಿದ್ಯಾರ್ಥಿಗಳು ಹಾಗೂ ಮನುಷ್ಯರಿಗೆ ಅತ್ಯವಶ್ಯಕವಾಗಿದೆ ಎಂದರು.

ಎರಡು ದಿನ ನಡೆಯುವ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ 9 ತೋಟಗಾರಿಕೆ ಮಹಾವಿದ್ಯಾಲಯಗಳ 460 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.

ಮುನಿರಾಬಾದ್ ತೋಟಗಾರಿಕೆ ವಿದ್ಯಾಲಯದ ಡೀನ್ ಡಾ. ತಮ್ಮಯ್ಯ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಗಳಾದ ನಿಸರ್ಗ ಭಟ್ ಹಾಗೂ ನಿತಿನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕಲ್ಯಾಣದ ಡೀನ್ ಡಾ. ರಾಮಚಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಹಾಗೂ ಇತರರು ಉಪಸ್ಥಿತರಿದ್ದರು. ಪ್ರೊ. ಹಾಲೇಶ ವಂದಿಸಿದರು.