ಮಿನಿ ವಿಧಾನಸೌಧದಲ್ಲಿಯೇ ಬಾಗಲಕೋಟೆ ವಿವಿ! ಕ್ಯಾಂಪಸ್‌ಗೆ ಗುರುತಿಸಿರುವ 39 ಎಕರೆ ಇನ್ನೂ ಸಿಕ್ಕಿಲ್ಲ

| N/A | Published : Mar 22 2025, 02:04 AM IST / Updated: Mar 22 2025, 09:36 AM IST

ಮಿನಿ ವಿಧಾನಸೌಧದಲ್ಲಿಯೇ ಬಾಗಲಕೋಟೆ ವಿವಿ! ಕ್ಯಾಂಪಸ್‌ಗೆ ಗುರುತಿಸಿರುವ 39 ಎಕರೆ ಇನ್ನೂ ಸಿಕ್ಕಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

  78 ಕಾಲೇಜುಗಳು ಮತ್ತು 30 ಸಾವಿರ ವಿದ್ಯಾರ್ಥಿಗಳನ್ನು ಹೊಂದಿರುವ ವಿವಿ ಕೋಟೆ ನಾಡಿನ ಬಾಗಲಕೋಟೆ ವಿಶ್ವವಿದ್ಯಾಲಯ ಆದರೂ, ಇದರ ಹೊಸ ಕ್ಯಾಂಪಸ್‌ಗೆ ಗುರುತಿಸಿರುವುದು ಕೇವಲ 39 ಎಕರೆ ಜಾಗ. ಆ ಭೂಮಿಯನ್ನೂ ಸರ್ಕಾರ ವಿವಿಯ ಕೈಗೊಪ್ಪಿಸಿಲ್ಲ.

ಈಶ್ವರ ಶೆಟ್ಟರ್‌

 ಬಾಗಲಕೋಟೆ : ಮುಚ್ಚುವ/ವಿಲೀನದ ಆತಂಕದಲ್ಲಿರುವ ರಾಜ್ಯದ 9 ವಿಶ್ವವಿದ್ಯಾಲಯಗಳಲ್ಲೇ ಅತಿ ಹೆಚ್ಚು 78 ಕಾಲೇಜುಗಳು ಮತ್ತು 30 ಸಾವಿರ ವಿದ್ಯಾರ್ಥಿಗಳನ್ನು ಹೊಂದಿರುವ ವಿವಿ ಕೋಟೆ ನಾಡಿನ ಬಾಗಲಕೋಟೆ ವಿಶ್ವವಿದ್ಯಾಲಯ ಆದರೂ, ಇದರ ಹೊಸ ಕ್ಯಾಂಪಸ್‌ಗೆ ಗುರುತಿಸಿರುವುದು ಕೇವಲ 39 ಎಕರೆ ಜಾಗ. ಆ ಭೂಮಿಯನ್ನೂ ಸರ್ಕಾರ ವಿವಿಯ ಕೈಗೊಪ್ಪಿಸಿಲ್ಲ.

ಬಾಗಲಕೋಟೆ ವಿವಿಗೆ ತನ್ನ ವ್ಯಾಪ್ತಿಯ ಕಾಲೇಜುಗಳು ಮತ್ತು ವಿದ್ಯಾರ್ಥಿಗಳಿಂದ ಸಂಯೋಜನಾ ಶುಲ್ಕ, ದಾಖಲಾತಿ ಅನುಮೋದನಾ ಶುಲ್ಕ ಮತ್ತು ಪರೀಕ್ಷಾ ಶುಲ್ಕದಿಂದಲೇ ವಾರ್ಷಿಕ ಸುಮಾರು ನಾಲ್ಕೈದು ಕೋಟಿ ರು. ಆಂತರಿಕ ಆದಾಯ ಬರುತ್ತಿದೆ. ಈ ಆದಾಯದಲ್ಲೇ ತಕ್ಕಮಟ್ಟಿಗೆ ವಿವಿಯನ್ನು ನಿರ್ವಹಿಸಿಕೊಂಡು ಹೋಗುತ್ತಿದೆ. ಖರ್ಚು ವೆಚ್ಚಗಳನ್ನು ಕಳೆದು ಉಳಿಯುವ ಹಣದಲ್ಲಿ ಪ್ರತೀ ವರ್ಷ ಒಂದಷ್ಟು ತರಗತಿ ಕೊಠಡಿ, ಹೊಸ ಆಡಳಿತ ವಿಭಾಗ, ಸಂಶೋಧನಾ ಕೇಂದ್ರ, ಗ್ರಂಥಾಲಯ ಹೀಗೆ ಕನಿಷ್ಠ ಕಟ್ಟಡ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಿಕೊಳ್ಳಲು ಕ್ಯಾಂಪಸ್‌ ಭೂಮಿಯೇ ವಿವಿಗೆ ಹಸ್ತಾಂತರ ಆಗಿಲ್ಲ.

ಪರಿಣಾಮ ಬಾಗಲಕೋಟೆ ವಿವಿ ಆರಂಭವಾಗಿ ಎರಡು ವರ್ಷ ಕಳೆದರೂ ತೀವ್ರ ಸ್ಥಳಾವಕಾಶ ಕೊರತೆ ಇರುವ ಜಮಖಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲೇ ಕಾರ್ಯವರ್ನಿಹಿಸಬೇಕಾಗಿದೆ. ಇಲ್ಲಿ ಸದ್ಯ ಲಭ್ಯವಿರುವುದು ಕೇವಲ 2 ಎಕರೆ ಜಾಗ ಅಷ್ಟೆ. ಸ್ಥಳಾವಕಾಶದ ಕೊರತೆಯಿಂದ ಗ್ರಂಥಾಲಯ, ಭದ್ರತಾ ಸಿಬ್ಬಂದಿ ಕೊಠಡಿಗಳನ್ನೂ ತರಗತಿಗಳಾಗಿ ಮಾಡಿಕೊಳ್ಳಲಾಗಿದೆ. 2025-26ನೇ ಸಾಲಿನಲ್ಲಿ ಪ್ರವೇಶಾತಿ ನಡೆದರೆ ಒಟ್ಟು 45 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಸಾಧ್ಯತೆಯಿದೆ.

ಇದರಿಂದ ಮುಂದಿನ ದಿನಗಳಲ್ಲಿ ತರಗತಿ ಚಟುವಟಿಕೆಗಳಿಗೆ ಸಮಸ್ಯೆ ಬಿಗಡಾಯಿಸುವ ಎಲ್ಲಾ ಲಕ್ಷಣಗಳಿವೆ. ಹಾಗಾಗಿ ಹೊಸ ಕ್ಯಾಂಪಸ್‌ಗೆ ಗುರುತಿಸಿರುವ ಜಮೀನು ಹಸ್ತಾಂತರಿಸದ ಹೊರತು ಇದು ಒಂದು ಸ್ನಾತಕೋತ್ತರದ ಅಧ್ಯಯನ ಕೇಂದ್ರದ ರೀತಿಯಲ್ಲೇ ಕಾರ್ಯನಿರ್ವಹಿಸಬೇಕಾಗಿದೆ. ಹೆಚ್ಚು ಕಾಲೇಜು, ಮಕ್ಕಳನ್ನು ಹೊಂದಿರುವ ವಿವಿಗೆ 39 ಎಕರೆಗಳು ಕೂಡ ಸಾಲುವುದಿಲ್ಲ. ಕನಿಷ್ಠ 50 ಎಕರೆಯನ್ನಾದರೂ ನೀಡಬೇಕು ಎನ್ನುವುದು ಜಿಲ್ಲೆಯ ಸಂಸ್ಥೆಗಳು, ಜನಪ್ರತಿನಿಧಿಗಳ ಆಗ್ರಹ.

ವಿವಿಯಲ್ಲಿ 7 ಸ್ನಾತಕೋತ್ತರ ವಿಭಾಗಗಳು ಹಾಗೂ ಕೆಲ ಕಾಲೇಜುಗಳು ಸೇರಿ ಒಟ್ಟು 13 ಸ್ನಾತಕೋತ್ತರ ವಿಭಾಗ ಹಾಗೂ 22 ಸ್ನಾತಕ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.50ಕ್ಕೂ ಹೆಚ್ಚು ಬಾಲಕಿಯರಿದ್ದರೆ, ಶೇ.90ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು. ಜೊತೆಗೆ, ವಿಶ್ವವಿದ್ಯಾಲಯ ಇರುವುದು ಗ್ರಾಮೀಣ ಪ್ರದೇಶದಲ್ಲಿ ಎನ್ನುವುದು ಗಮನಾರ್ಹ.

ಆರ್ಥಿಕವಾಗಿ, ಭೌತಿಕವಾಗಿ ವಿವಿ ಸದೃಢವಾಗಿಲ್ಲ:

2023ರ ಮಾರ್ಚ್‌ 21ರಂದು ಆರಂಭವಾದ ಈ ವಿವಿ ಆರ್ಥಿಕವಾಗಿ ಹಾಗೂ ಭೌತಿಕವಾಗಿ ಸದೃಢವಾಗಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರ್ಕಾರದಿಂದ ನಯಾಪೈಸೆ ಈವರೆಗೆ ಬಂದಿಲ್ಲ. ಸೂಕ್ತ ಕಟ್ಟಡ, ಅಗತ್ಯ ಸಿಬ್ಬಂದಿ ಕೊರತೆ ಜೊತೆಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಇದೆಲ್ಲವನ್ನು ವ್ಯವಸ್ಥೆ ಮಾಡಿ ವಿಶ್ವವಿದ್ಯಾಲಯವನ್ನು ಬಲಪಡಿಸುವ ಜವಾಬ್ದಾರಿ ಸರ್ಕಾರದ್ದು. ಆದರೆ, ಸರ್ಕಾರ ಈ ಹೊಸ ವಿವಿಯನ್ನೂ ಮುಚ್ಚುವ/ವಿಲೀನದ ಆಲೋಚನೆ ನಡೆಸಿರುವುದು ಸ್ಥಳೀಯವಾಗಿ ಭಾರೀ ಆಕ್ರೋಶ, ಪ್ರತಿಭಟನೆಗಳಿಗೆ ಕಾರಣವಾಗಿದೆ.

ಸಿಬ್ಬಂದಿ ಕೊರತೆ: ನೂತನ ವಿವಿಗೆ 51 ಬೋಧಕೇತರ ಹಾಗೂ 12 ಬೋಧಕ ಸಿಬ್ಬಂದಿ ಮಂಜೂರಾಗಿದ್ದು, ಸದ್ಯ ಇಲ್ಲಿ ಪೂರ್ಣಾವಧಿಯ 15 ಜನ ಬೋಧಕೇತರ ಹಾಗೂ 3 ಬೋಧಕ ಸಿಬ್ಬಂದಿ ಇದ್ದಾರೆ. 18 ಅತಿಥಿ ಉಪನ್ಯಾಸಕರು ಹಾಗೂ 18 ಜನ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ 7 ಸ್ನಾತಕೋತ್ತರ ವಿಭಾಗದಲ್ಲಿ 450 ವಿದ್ಯಾರ್ಥಿಗಳು ಇದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ವಿವಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳೇನು ಎಂದು ತಿಳಿದುಕೊಳ್ಳುವ ತಮ್ಮ ಕನಿಷ್ಠ ಶಿಕ್ಷಣ ಪ್ರೇಮ ಕೂಡ ವ್ಯಕ್ತಪಡಿಸಿಲ್ಲ. ಇದೆಲ್ಲದರ ಪರಿಣಾಮ ಇವತ್ತು ಬಾಗಲಕೋಟೆ ವಿವಿಗೆ ಕುತ್ತು ಬಂದಿದೆ.

ಪ್ರಮುಖ ಹುದ್ದೆಯೇ ಖಾಲಿ!

ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಈ ಪೈಕಿ, ವಿವಿಯ ಆಧಾರವಾಗಿರುವ ಪರೀಕ್ಷಾಂಗ ಮೌಲ್ಯಮಾಪಕರ ಹುದ್ದೆಯೇ ಖಾಲಿ ಇದೆ. ಈ ಹುದ್ದೆ ಯಾವುದೇ ವಿವಿಗೆ ಬೇಕಾದ ಪ್ರಮುಖ ಹುದ್ದೆ. ಆದರೇ ಇಲ್ಲಿ ಅದೇ ಹುದ್ದೆ ಖಾಲಿ ಇದೆ.

ಬಾಗಲಕೋಟೆ ವಿವಿಯನ್ನು ಮುಚ್ಚಲು ಅವಕಾಶ ಕೊಡುವುದಿಲ್ಲ ಎಂದು ಹೇಳಿಕೊಂಡು ಈಗಾಗಲೇ ವಿದ್ಯಾರ್ಥಿಗಳು, ಸಂಘಟನೆಗಳು ಪ್ರತಿಭಟನೆ ನಡೆಸಿವೆ. ವಿಶ್ವವಿದ್ಯಾಲಯ ಉಳಿದರೆ ಮಾತ್ರ ಸಾಲದು, ಹೊಸ ವಿವಿಗೆ ಅಗತ್ಯವಿರುವ ಕನಿಷ್ಠ 50 ಎಕರೆ ಜಮೀನು, ಪೂರ್ಣಾವಧಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿವಿಗೆ ಅಗತ್ಯ ಅನುದಾನ ಒದಗಿಸಬೇಕು. ಆ ಮೂಲಕ ಸರ್ಕಾರ ಗ್ರಾಮೀಣ ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪನೆ ಆಗಿರುವ ವಿಶ್ವವಿದ್ಯಾಲಯಗಳನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕಿದೆ.

-ಹನುಮಂತ ನಿರಾಣಿ, ವಿಪ ಸದಸ್ಯರು, ಬಾಗಲಕೋಟೆ

ಹೊಸ ವಿವಿಯು ತನ್ನಲ್ಲಿ ಕ್ರೋಢೀಕರಣವಾಗುವ ಸಂಪನ್ಮೂಲದಲ್ಲಿ ಸದ್ಯ ತನ್ನ ಚಟುವಟಿಕೆ ಆರಂಭಿಸಿದೆ. ಬಾಗಲಕೋಟೆ ವಿವಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿರುವುದರಿಂದ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಇಲ್ಲ. ಸರ್ಕಾರ ಸಹ ನಮ್ಮ ವಿವಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಂಶೋಧನೆಗೆ ಬೇಕಾದ ಸೌಲಭ್ಯಗಳನ್ನು ವಿಸ್ತರಿಸುವ ಯೋಚನೆ ಇದೆ. ವಿವಿಯನ್ನು ಮುಚ್ಚುವ ವಿಷಯ ಹಾಗೂ ವಿವಿಯನ್ನು ವಿಲೀನಗೊಳಿಸುವ ನಿರ್ಧಾರ ಸರ್ಕಾರದ ಮಟ್ಟದಲ್ಲಿನ ವಿಷಯ.

- ಡಾ। ಆನಂದ ದೇಶಪಾಂಡೆ, ಕುಲಪತಿ, ಬಾಗಲಕೋಟೆ ವಿವಿ, ಜಮಖಂಡಿ.