ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಹು ದಿನಗಳ ಬೇಡಿಕೆಯಾಗಿದ್ದ ಪ್ರಸಾರ ಭಾರತೀಯ ಆಕಾಶವಾಣಿ ಎಫ್.ಎಂ ಕೇಂದ್ರಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಶುಕ್ರವಾರ ಚಾಲನೆ ನೀಡಿದರು.ಮದರಾಸ ನಿಂದ ವಿಡಿಯೋ ವರ್ಚ್ಯುವಲ್ ಮೂಲಕ ಪ್ರಧಾನಿ ಮೋದಿಯವರು ಏಕ ಕಾಲಕ್ಕೆ 4 ಎಫ್‌ಎಂ ಕೇಂದ್ರ ಹಾಗೂ 2 ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ವೀಕ್ಷಿಸಿ ನಂತರ ಬಾಗಲಕೋಟೆ ಆಕಾಶವಾಣಿ ಎಫ್.ಎಂ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಬೇಡಿಕೆಯಲ್ಲಿರುವ ಆಕಾಶವಾಣಿ ಎಫ್‌ಎಂ ಕೇಂದ್ರ ತಾಂತ್ರಿಕ ಕಾರಣಗಳಿಂದ ಪ್ರಾರಂಭಗೊಂಡಿರಲಿಲ್ಲ. ಈಗ ಅದು ಸಾಕಾರಗೊಂಡಿದೆ ಎಂದರು.
ಸದ್ಯ 15 ರಿಂದ 20 ಕಿ.ಮೀ ವ್ಯಾಪ್ತಿಯವರಗೆ ಎಫ್‌ಎಂ ರೇಡಿಯೋ ಕೇಳಲು ಅವಕಾಶವಿದ್ದು, ಇದರಲ್ಲಿ ಪ್ರಸಾರವಾಗುವ ಸರ್ಕಾರದ ಯೋಜನೆಗಳನ್ನು ಹಾಗೂ ಕೃಷಿಕರಿಗೆ ಉಪಯುಕ್ತವಾದ ಮಾಹಿತಿ, ವಿದ್ಯಾರ್ಥಿಗಳಲ್ಲಿ ಅಧ್ಯನಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಪ್ರಸಾರವಾಗಲಿದೆ. ಈ ಕೇಂದ್ರಕ್ಕೆ ಸದ್ಯ ಇಬ್ಬರು ಸಿಬ್ಬಂದಿ ನೇಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸ್ಟುಡಿಯೋ ಪ್ರಾರಂಭಿಸುವ ಚಿಂತನೆ ಇದೆ ಎಂದರು.ಧಾರವಾಡ ಆಕಾಶವಾಣಿ ಕೇಂದ್ರದ ಉಪನಿರ್ದೇಶಕ ಅರುಣ ಪ್ರಬಾಕರ ಮಾತನಾಡಿ, ರಾಜ್ಯದಲ್ಲಿ ಬೀದರ್, ರಾಣೆಬೆನ್ನೂರು, ಕೆಜಿಎಫ್ ಹಾಗೂ ಬಾಗಲಕೋಟೆಯಲ್ಲಿ ತಲಾ ಒಂದು ಎಫ್‌ಎಂ ಕೇಂದ್ರ ಪ್ರಾರಂಭ ಹಾಗೂ ಉಡಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಎಫ್‌ಎಂ ಕೇಂದ್ರ ಶಿಲ್ಯಾನ್ಯಾಸಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇಲ್ಲಿಯದು 100 ವ್ಯಾಟ್‌ನ ಸಾಮರ್ಥ್ಯದ ಎಫ್‌ಎಂ ಕೇಂದ್ರವಾಗಿದ್ದು, 100.1 ತರಂಗಾಂತರ ಹೊಂದಿದೆ. ಉತ್ತಮ ಹಾಗೂ ಸ್ಪಷ್ಟವಾದ ಧ್ವನಿಯಲ್ಲಿ ಕೇಳಬಹುದಾಗಿದೆ ಎಂದರು.
ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅಭಿಯಂತರ ಮನ್ಮಥಯ್ಯಸ್ವಾಮಿ, ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ, ಪ್ರಸಾರ ಭಾರತಿ ಕೇಂದ್ರದ ನಿವೃತ್ತ ಅಧಿಕಾರಿ ಈರಣ್ಣ ಬಣವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.