ಸಾರಾಂಶ
ಪ್ರದರ್ಶನದಲ್ಲಿ ಕೃಷ್ಣೆ ಮತ್ತು ಘಟಪ್ರಭಾ ನದಿಗಳು ಸಂಗಮಗೊಳ್ಳುವ ಚಿಕ್ಕಸಂಗಮದ ಐತಿಹಾಸಿಕ ಸಂಗಮನಾಥನ ದೇವಾಲಯ ಬಿಂಬಿಸುವ ಸ್ತಬ್ಧಚಿತ್ರ ಇದಾಗಿದ್ದು
ಬಾಗಲಕೋಟೆ: 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಬಾಗಲಕೋಟೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ಘಟಕ ಪ್ರಥಮ ಸ್ಥಾನ ಪಡೆಯಿತು.
ಜಿಲ್ಲಾಡಳಿತದಿಂದ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಕೃಷ್ಣೆ ಮತ್ತು ಘಟಪ್ರಭಾ ನದಿಗಳು ಸಂಗಮಗೊಳ್ಳುವ ಚಿಕ್ಕಸಂಗಮದ ಐತಿಹಾಸಿಕ ಸಂಗಮನಾಥನ ದೇವಾಲಯ ಬಿಂಬಿಸುವ ಸ್ತಬ್ಧಚಿತ್ರ ಇದಾಗಿದ್ದು, ಎಲ್ಲರ ಆಕರ್ಷಣೀಯ ಕೇಂದ್ರವಾಗಿತ್ತು.ಐತಿಹಾಸಿಕ ಐಹೊಳೆ, ಬನಶಂಕರಿ, ಪಟ್ಟದಕಲ್ಲು ಹಾಗೂ ಕೂಡಲಸಂಗ, ಜ್ಞಾನಪೀಠ ಪ್ರಶಸ್ತಿ ಪಡೆದ ಮಹನೀಯರ ಹಾಗೂ ಜೋಗತಿ ಮಂಜಮ್ಮ, ಸುಧಾಮೂರ್ತಿ, ಸಾಲುಮರದ ತಿಮ್ಮಕ್ಕರಂಥಹರ ಭಾವಚಿತ್ರಗಳ ಪ್ರದರ್ಶನ ಬಿಂಬಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತಬ್ಧಚಿತ್ರ ದ್ವಿತೀಯ ಸ್ಥಾನ ಪಡೆದರೆ, ರೆಂಬೆ ಸಾಗಾಣಿಕೆ ಮನೆ, ರೈತರಿಗೆ ಉಚಿತವಾಗಿ ನೀಡುವ ಸೊಂಕು ನಿವಾರಕ ಮತ್ತು ಸಸ್ಯ ಸಂವರ್ಧಕಗಳ ಮಾಹಿತಿಯನ್ನೊಳಗೊಂಡ ರೇಷ್ಮೆ ಇಲಾಖೆ ಸ್ತಬ್ಧಚಿತ್ರ ತೃತೀಯ ಸ್ಥಾನ ಪಡೆದುಕೊಂಡಿತು.
ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಕನ್ನಡಾಂಬೆ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ವಿಪ ಸದಸ್ಯ ಪಿ.ಎಚ್.ಪೂಜಾರ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾಲಪದ ಕಲಾತಂಡಗಳು, ವಿವಿಧ ಇಲಾಖೆಯವರು ತಯಾರಿಸಿದ ಸ್ತಬ್ಧ ಚಿತ್ರಗಳು ಎಲ್ಲರನ್ನು ಆಕರ್ಷಿಸಿದವು. ಮೆರವಣಿಗೆಯು ನವನಗರ ಬಸ್ ನಿಲ್ದಾಣ, ಎಲ್ಐಸಿ ವೃತ್ತದ ಮೂಲಕ ಹೆಸ್ಕಾಂ ಕಚೇರಿ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಅಂತ್ಯಗೊಂಡಿತು.