ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳ ಸರಣಿ ಪ್ರವಚನ ಕಾರ್ಯಕ್ರಮದ ಶುಭಾರಂಭ ಹಿರಿಯಂಗಡಿ ಶಿವತಿಕೆರೆಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು
ಕಾರ್ಕಳ: ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಕಳ, ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನ, ಅಮಿತ್ ಎಸ್. ಪೈ ಮೆಮೋರಿಯಲ್, ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರ ಪೆರ್ವಾಜೆ, ಶ್ರೀ ಭಗವದ್ಗೀತಾ ಮಿತ್ರವೃಂದ ಶಿವತಿಕೆರೆ, ಹಿರಿಯಂಗಡಿ ಕಾರ್ಕಳ ಸಹಯೋಗದಲ್ಲಿ ಶ್ರೀಮದ್ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳ ಸರಣಿ ಪ್ರವಚನ ಕಾರ್ಯಕ್ರಮದ ಶುಭಾರಂಭ ಹಿರಿಯಂಗಡಿ ಶಿವತಿಕೆರೆಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಆರಂಭದಲ್ಲಿ ಉಪಸ್ಥಿತರಿದ್ದ ಸಮಸ್ತರಿಂದ ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದ ಸಾಮೂಹಿಕ ಪಠಣ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ನಾಯಕ್ ಅವರು ದೀಪ ಪ್ರಜ್ವಲನೆ ನೆರವೇರಿಸಿದರು. ನಂತರ ಶಿಕ್ಷಕ ಗಣೇಶ್ ಜಾಲ್ಸೂರು ಅವರು ಗೀತೆಯ ಮೊದಲ ಅಧ್ಯಾಯವಾದ ಅರ್ಜುನ ವಿಷಾದ ಯೋಗದ ಕುರಿತು ಉಪನ್ಯಾಸ ನೀಡಿದರು.ಈ ಗೀತಾ ಅಭಿಯಾನದಲ್ಲಿ ಹಿರಿಯಂಗಡಿ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರರಾದ ಸಂಜೀವ ದೇವಾಡಿಗ, ಸುದರ್ಶನ ಭಂಡಾರಿ, ಗುರುಪ್ರಸಾದ್ ರಾವ್, ಜಯಂತಿ ದೇವಾಡಿಗ ಹಾಗೂ ದೇವಳದ ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ದೇವಾಡಿಗ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಅರುಣಾ ದಿನೇಶ್ ನಿರೂಪಿಸಿದರು. ದೀಪಾ ದೇವಾಡಿಗ ಸ್ವಾಗತಿಸಿದರು. ಸ್ವಸ್ತಿ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಗೀತಾ ಅಭಿಯಾನದ ಸಂಘಟಕ ಸಂಜಯ ಕುಮಾರ್ ಸಂಯೋಜಿಸಿದರು. ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ನವೀನ್ ಪೈ ಸಹಕರಿಸಿದರು.