ಮಾ.2ಕ್ಕೆ ಬಾಗೇಪಲ್ಲಿ ತಾ.ಸಾಹಿತ್ಯ ಸಮ್ಮೇಳನ

| Published : Feb 20 2024, 01:49 AM IST

ಸಾರಾಂಶ

ಸಮ್ಮೇಳನಕ್ಕೆ ಹೆಚ್ಚು ಹೆಚ್ಚು ಕನ್ನಡದ ಮನಸ್ಸುಗಳನ್ನು ಆಕರ್ಷಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳು, ಸಾರ್ವಜನಿಕರ ಸಹಕಾರ ನೀಡಬೇಕು. ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಕನ್ನಡ ಸಾಹಿತ ಸಮ್ಮೇಳನ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು. ಆದರೆ ಇಲ್ಲಿನ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗುತ್ತಿದ್ದಾರೆಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಕ್ಕೆ ಗೈರುಹಾಜರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಿ ಯಾವುದೇ ಮುಲಾಜು ಇಲ್ಲದೆ ಕಾನೂನು ಕ್ರಮ ತೆಗೆದುಗೊಳ್ಳಿ ಎಂದು ತಹಸೀಲ್ದಾರ್‌ ರವರಿಗೆ ಸೂಚನೆ ನೀಡಿದರು.

ಮಾ. 2ರಂದು ಸಾಹಿತ್ಯ ಸಮ್ಮೇಳನ

ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ಮಾ.2ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನಕ್ಕೆ ಹೆಚ್ಚು ಹೆಚ್ಚು ಕನ್ನಡದ ಮನಸ್ಸುಗಳನ್ನು ಆಕರ್ಷಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಉದಯಕುಮಾರ್ ಅಧ್ಯಕ್ಷ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ಮಾರ್ಚ. 2 ರಂದು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು ಚುಟುಕು ಸಾಹಿತಿ, ಕಲಾವಿದ, ನಿರ್ದೇಶಕ ಬಾಗೇಪಲ್ಲಿಯ ಉದಯಕುಮಾರ್ ಎಸ್. ರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ಸಭೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್, ತಹಸೀಲ್ದಾರ್ ಪ್ರಶಾಂತ್ ಕೆ ಪಾಟೀಲ ಮಾತನಾಡಿದರು. ತಾಪಂ ಇಒ ಎಂ.ವಿ.ರಮೇಶ್, ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ಶರಣಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಸಿ.ಎನ್.ಸತ್ಯನಾರಾಯಣರೆಡ್ಡಿ, ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ವರ್ಣಿ, ಸಿಡಿಪಿಓ ರಾಮಚಂದ್ರ, ಮತ್ತಿತರರು ಇದ್ದರು.