ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಕಿತ್ತೂರು ಚನ್ನಮ್ಮಾಜಿ ಅವರ 200ನೇ ವರ್ಷದ ವಿಜಯೋತ್ಸವ ನಿಮಿತ್ತವಾಗಿ ಬೈಲಹೊಂಗಲ ಉತ್ಸವ-2024 ಅ.28 ರಂದು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಘಟಣೆ ಮುಖಂಡ ಎಫ್.ಎಸ್.ಸಿದ್ದನಗೌಡರ ಹೇಳಿದರು.ಪಟ್ಟಣದಲ್ಲಿ ಚನ್ನಮ್ಮ ಸಮಾಧಿ ಹತ್ತಿರದ ನಡೆಯುತ್ತಿರುವ ಸಮಾರಂಭದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಚನ್ನಮ್ಮ ವೃತ್ತದಿಂದ ಚನ್ನಮ್ಮ ಐಕ್ಯ ಸ್ಥಳದವರೆಗೆ ಸಾವಿರಾರು ಯುವಕ, ಯುವತಿಯರಿಂದ ಬೃಹತ್ ಬೈಕ್ ರ್‍ಯಾಲಿ ಜರುಗಲಿದೆ. ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಭಮೇಳ, ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಸಂಜೆ ಸಮಾರಂಭ ಉದ್ಘಾಟಿಸಲಿದ್ದು ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಅಲ್ಲದೇ ಪಟ್ಟಣದ ಪ್ರತಿ ಮನೆ ಮುಂದೆ ಮತ್ತು ಬಜಾರ ರಸ್ತೆಯಲ್ಲಿ ತಳಿರು ತೋರಣ, ಚನ್ನಮ್ಮನ ಧ್ವಜ, ಭಾವಚಿತ್ರ, ಬಣ್ಣದ ರಂಗೋಲಿಗಳಿಂದ ಸಿಂಗರಿಸಿ ಉತ್ಸವಕ್ಕೆ ಮೆರಗು ತರಬೇಕು ಎಂದು ಮನವಿ ಮಾಡಿದರು. ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಮುರಗೇಶ ಗುಂಡ್ಲೂರ, ಮಹಾಂತೇಶ ತುರಮರಿ, ರಫೀಕ್ ಬಡೇಘರ ಮಾತನಾಡಿ, ಬೈಲಹೊಂಗಲ ನಾಡು ವೀರ ಮಹನೀಯರ ನಾಡಾಗಿದ್ದು, ಅವರ ಉತ್ಸವ ಆಚರಣೆ ಮಾಡುತ್ತಿರುವುದು ನಮ್ಮ ನಿಮ್ಮೆಲ್ಲರ ಪುಣ್ಯದ ಕೆಲಸವಾಗಿದ್ದು ಈ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.ಮಹೇಶ ಹರಕುಣಿ, ಶಿವಾನಂದ ಕೋಲಕಾರ, ಮುದಕಪ್ಪ ತೋಟಗಿ, ರಾಜು ನರಸನ್ನವರ, ವಿಠ್ಠಲ ಕಡಕೋಳ, ಸುರೇಶ ಹೊಳಿ, ಚಿದಾನಂದ ಪೂಜೇರ ಮುಂತಾದವರು ಇದ್ದರು. ಈಗಾಗಲೇ ರಾಜ್ಯಸರ್ಕಾರ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತ ಈ ಭಾಗದ ಜನತೆಯ ಮನವಿಗೆ ಸ್ಪಂದಿಸಿ ಉತ್ಸವ ಆಚರಣೆ ಮಾಡುತ್ತಿರುವುದು ಸಂತಸವಾಗಿದೆ. ಈ ಉತ್ಸವ ಕೇವಲ ಸರ್ಕಾರದ ಉತ್ಸವ ಆಗದೇ ಮನೆ ಮನೆಯ ಉತ್ಸವವಾಗಿ ಹಬ್ಬದ ವಾತಾವರಣ ನಿರ್ಮಾಣ ಮಾಡಿ, ಚನ್ನಮ್ಮನಿಗೆ ಗೌರವ ಸಮರ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಉತ್ಸವದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.
-ಎಫ್.ಎಸ್.ಸಿದ್ದನಗೌಡರ, ಸಂಘಟಣೆ ಮುಖಂಡರು.