ಎಲ್ಲ ಸಮುದಾಯದ ಜನರು ಒಂದಾಗಿ ಬದುಕಬೇಕು. ಯುವಕರು ಶಿಕ್ಷಣ ಹಾಗೂ ಉತ್ತಮ ಮೌಲ್ಯ ಅಳವಡಿಸಿಕೊಳ್ಳಬೇಕು
ಕುಷ್ಟಗಿ: ಬಕ್ರೀದ್ ತ್ಯಾಗ, ಸಹೋದರತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆ ನಂತರ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಸಹಕಾರ ಹೆಚ್ಚಿಸುವಲ್ಲಿ ಹಬ್ಬಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.ಎಲ್ಲ ಸಮುದಾಯದ ಜನರು ಒಂದಾಗಿ ಬದುಕಬೇಕು. ಯುವಕರು ಶಿಕ್ಷಣ ಹಾಗೂ ಉತ್ತಮ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಧರ್ಮಗುರುಗಳು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಯುವಕರು ಇದ್ದರು.ವಿವಿಧೆಡೆ ಆಚರಣೆ: ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಮುದೇನೂರು, ತಾವರಗೇರಾ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಕ್ರೀದ್ ಹಬ್ಬ ಮುಸ್ಲಿಂ ಬಾಂಧವರು ಭಕ್ತಿಭಾವದಿಂದ ಆಚರಿಸಿದರು.
ಬೆಳಗ್ಗೆಯೇ ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್ ಸಲ್ಲಿಸಿ ಶಾಂತಿ,ಸೌಹಾರ್ದತೆ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿದರು.ನಂತರ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮ ಹಂಚಿಕೊಂಡರು.ಮನೆಗಳಲ್ಲಿ ವಿಶೇಷ ಆಹಾರ ತಯಾರಿಸಿ ಅತಿಥಿಗಳಿಗೆ ಆತಿಥ್ಯ ನೀಡಲಾಯಿತು. ಯುವಕರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಖುಷಿಯಲ್ಲಿ ಪಾಲ್ಗೊಂಡರು. ಸಾಮೂಹಿಕ ಪ್ರಾರ್ಥನೆಯ ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬಕ್ರೀದ ಹಬ್ಬದ ಹಿನ್ನೆಲೆ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ಕ್ರಮ ಕೈಗೊಂಡಿದ್ದು, ಎಲ್ಲೆಡೆ ಶಾಂತಿಯುತ ವಾತಾವರಣ ಕಂಡು ಬಂದಿತು.