ಸಾರಾಂಶ
ನ್ಯಾಯವಾದಿ ಕೆಂಜೂರು ಬಾಲಚಂದ್ರ ರಾವ್ ಸ್ಮರಣಾರ್ಥ ವಕೀಲರ ಸಂಘದ ಸಭಾಂಗಣದಲ್ಲಿ ಅವರ ಭಾವಚಿತ್ರವನ್ನು ಶುಕ್ರವಾರ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾ.ಇ.ಎಸ್. ಇಂದಿರೇಶ್ ಅನಾವರಣಗೊಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ವಕೀಲರ ಸಂಘದ ಹಿರಿಯ ಸದಸ್ಯರಾಗಿದ್ದು, 2024 ರ ಆ.24 ರಂದು ನಿಧನರಾದ ನ್ಯಾಯವಾದಿ ಕೆಂಜೂರು ಬಾಲಚಂದ್ರ ರಾವ್ ಸ್ಮರಣಾರ್ಥ ವಕೀಲರ ಸಂಘದ ಸಭಾಂಗಣದಲ್ಲಿ ಅವರ ಭಾವಚಿತ್ರವನ್ನು ಶುಕ್ರವಾರ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾ.ಇ.ಎಸ್. ಇಂದಿರೇಶ್ ಅನಾವರಣಗೊಳಿಸಿದರು.ನಂತರ ಮಾತನಾಡಿದ ಅವರು, ನ್ಯಾಯಾಲಯದ ಕಲಾಪಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಾಲಚಂದ್ರ ರಾವ್ ಯುವ ವಕೀಲರಿಗೂ ತಮ್ಮ ಜ್ಞಾನ ಭಂಡಾರ ಧಾರೆ ಎರೆಯುತ್ತಿದ್ದರು ಎಂದು ಕೇಳಲ್ಪಟ್ಟಿದ್ದೇನೆ. ಇಂತಹ ಮೇರು ವ್ಯಕ್ತಿತ್ವದ ವಕೀಲರನ್ನು ಪಡೆದ ಉಡುಪಿಯ ವಕೀಲರು ಪುಣ್ಯವಂತರು ಎಂದರು.
ನನ್ನ ಸಹದ್ಯೋಗಿ ನ್ಯಾಯಧೀಶರು ಈ ಹಿಂದೆ ಉಡುಪಿಯಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಪ್ರಕರಣವೊಂದರಲ್ಲಿ ವಾದ ಮಂಡಿಸುತ್ತಿದ್ದ ರಾಮಚಂದ್ರ ರಾಯರು, ತಮ್ಮ ಪರವಾಗಿದ್ದ ಉಚ್ಚ, ಸರ್ವೋಚ್ಚ ನ್ಯಾಯಾಲಯದ 20 ತೀರ್ಪುಗಳ ಜೊತೆಗೆ ತಮಗೂ ಹಾಗು ತಮ್ಮ ಪ್ರತಿವಾದಿಗೂ ಅನುಕೂಲವಾಗಬಲ್ಲ ತೀರ್ಪೋಂದರ ಪ್ರತಿಯನ್ನು ನ್ಯಾಯಾಧೀಶರಿಗೆ ನೀಡಿದ್ದರು ಎಂಬ ಘಟನೆಯನ್ನು ಈಗ ಉಚ್ಚ ನ್ಯಾಯಾಲಯದಲ್ಲಿರುವ ನ್ಯಾಯಧೀಶರು ನನ್ನ ಬಳಿ ಹೇಳುತ್ತಾ, ನ್ಯಾಯಾಲಯಕ್ಕೆ ಪಾರದರ್ಶಕವಾಗಿದ್ದ ರಾಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್.ಎಸ್.ಗಂಗಣ್ಣನವರ್, ದಿ.ಕುಂಜೂರು ಬಾಲಚಂದ್ರ ರಾವ್ ಅವರ ಪತ್ನಿ ಶಾಂತಾ.ಬಿ.ರಾವ್, ಹೈಕೋರ್ಟ್ ಹಿರಿಯ ವಕೀಲ ಸಂಪತ್ ಆನಂದ್ ಶೆಟ್ಟಿ ಉಪಸ್ಥಿತರಿದ್ದರು.
ಹಿರಿಯ ನ್ಯಾಯವಾದಿ ಎನ್.ಕೆ.ಆಚಾರ್ಯ ಪ್ರಸ್ತಾವಿಕ ಮಾತನಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.