ಇಂಗ್ಲೆಂಡ್‌ನ ಎನ್‌ಎಚ್‌ಎಲ್‌, ಬಿಟಿಎ ಜತೆ ಬಾಲಾಜಿ ಆಸ್ಪತ್ರೆ ಒಡಂಬಡಿಕೆ

| Published : Dec 04 2024, 12:31 AM IST

ಇಂಗ್ಲೆಂಡ್‌ನ ಎನ್‌ಎಚ್‌ಎಲ್‌, ಬಿಟಿಎ ಜತೆ ಬಾಲಾಜಿ ಆಸ್ಪತ್ರೆ ಒಡಂಬಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಒಡಂಬಡಿಕೆಯಿಂದ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆ, ಶಿಕ್ಷಣ, ಸಂಶೋಧನೆ ಹಾಗೂ ತುರ್ತು ಚಿಕಿತ್ಸಾ ಆರೈಕೆಯ ಬಗ್ಗೆ ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕೌಶಲ್ಯಾಧಾರಿತ ತರಬೇತಿ ದೊರೆಯಲಿದೆ.

ಹುಬ್ಬಳ್ಳಿ:

ವಿಶ್ವದರ್ಜೆಯ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಜ್ಞಾನ ವಿನಿಮಯ ಮತ್ತು ಸಂಶೋಧನೆಗಾಗಿ ನಗರದ ಶ್ರೀಬಾಲಾಜಿ ನರರೋಗ ಆಸ್ಪತ್ರೆ ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಹಾಗೂ ಬ್ಯಾಪಿಯೋ ಟ್ರೈನಿಂಗ್ ಅಕಾಡೆಮಿ (ಬಿಟಿಎ)ಯೊಂದಿಗೆ ಒಂದು ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಕ್ರಾಂತಿಕಿರಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆ, ಶಿಕ್ಷಣ, ಸಂಶೋಧನೆ ಹಾಗೂ ತುರ್ತು ಚಿಕಿತ್ಸಾ ಆರೈಕೆಯ ಬಗ್ಗೆ ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕೌಶಲ್ಯಾಧಾರಿತ ತರಬೇತಿ ದೊರೆಯಲಿದೆ ಎಂದರು.

ಈ ಒಡಂಬಡಿಕೆಯೂ ಇಂಡೋ-ಇಂಗ್ಲೆಂಡ್ ನಡುವೆ ತಜ್ಞ ವೈದ್ಯರ ವಿನಿಮಯ, ಹೊಸ ಸಂಶೋಧನೆ, ವೃತ್ತಿ ನಾವೀನ್ಯತೆಗೆ ಹೆಚ್ಚಿನ ಉತ್ತೇಜನ ನೀಡುವ ಜತೆಗೆ, ವೈದ್ಯಕೀಯ ಪ್ರವಾಸೋದ್ಯಮಕ್ಕೂ ವೇದಿಕೆ ಕಲ್ಪಿಸಲಿದೆ. ಅಲ್ಲದೆ ತಜ್ಞರಿಂದ ವೈದ್ಯರು, ಶುಶ್ರೂಷಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ತುರ್ತು ಚಿಕಿತ್ಸೆ, ನ್ಯೂರೋ ಸರ್ಜರಿ ವೈದ್ಯಕೀಯ ಕ್ಷೇತ್ರದಲ್ಲಿನ ಆವಿಷ್ಕಾರ, ಸಂಶೋಧನೆ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯ ಕುರಿತ ಉಪನ್ಯಾಸ, ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದರು.

ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ ರಾಷ್ಟ್ರೀಯ ವೈದ್ಯಕೀಯ ನಿರ್ದೇಶಕ ಪ್ರೊ. ಸ್ಟೀಫನ್ ಪೋವಿಸ್, ಬ್ರಿಟಿಷ್ ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್‌ ಇಂಡಿಯಾ ಆರಿಜಿನ್ ಟ್ರೈನಿಂಗ್ ಅಕಾಡೆಮಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಪರಾಗ್ ಸಿಂಘಾಲ್ ಸಮ್ಮುಖದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಾಗಿದೆ ಎಂದು ತಿಳಿಸಿದರು.

ವೃತ್ತಿಪರ ಕ್ಲಿನಿಕಲ್ ಉತ್ಕೃಷ್ಟತೆ ಮತ್ತು ಪರಸ್ಪರ ಜ್ಞಾನ ವಿನಿಮಯದ ಉತ್ತೇಜನ, ವೈದ್ಯಕೀಯ ಶಿಕ್ಷಣ ನಾವಿನ್ಯತೆ ಹಾಗೂ ಕೌಶಲ್ಯದಲ್ಲಿ ನರ್ಸಿಂಗ್ ಸಾಮರ್ಥ್ಯ ಸುಧಾರಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ಈ ಒಡಂಬಡಿಕೆಯಿಂದ ಶ್ರೀಬಾಲಾಜಿ ಆಸ್ಪತ್ರೆಯ ಕೀರ್ತಿ ಇಂಗ್ಲೆಂಡ್‌ ವರೆಗೂ ವಿಸ್ತರಣೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ಶಶಾಂಕ್‌, ಶ್ರೀ ಬಾಲಾಜಿ ಆಸ್ಪತ್ರೆಯ ಸಿಇಒ ರಿಕಿ ಬೆಂಜಮಿನ್, ಆಡಳಿತಾಕಾರಿ ಪಿಆರ್‌ಒ ಶಿವಕುಮಾರ ಐ.ಬಿ. ಸೇರಿದಂತೆ ಹಲವರಿದ್ದರು.