ಕೊಪ್ಪಳ: ಕೊಪ್ಪಳ ಬಳಿ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ಮಾಡದಂತೆ ಹೋರಾಟ ತೀವ್ರಗೊಂಡ ಬೆನ್ನಲ್ಲೇ ತಾಲೂಕಿನ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡುವುದಾಗಿ ಬಲ್ಡೋಟಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಉಪಾಧ್ಯಕ್ಷ ರಮೇಶ ಅವರು ಘೋಷಣೆ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಜನರನ್ನು ಸೆಳೆಯಲು ಬಲ್ಡೋಟಾ ಕಂಪನಿ ಮುಂದಾಗಿದೆಯೇ ಎನ್ನುವ ಮಾತು ಕೇಳಿ ಬರಲಾರಂಭಿಸಿದೆ.
ನಗರದ ಮಸ್ಜಿದ್ ಎ ಯುಸೂಫಿಯಾ ಮಸೀದಿಯಲ್ಲಿ ನೀರು ಶುದ್ಧೀಕರಣ ಘಟಕವನ್ನು ಉಚಿತವಾಗಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ವೀಡಿಯೋ ವೈರಲ್ ಆಗಿದೆ. ಹಿರಿಯ ವಕೀಲ ಹಾಗೂ ವಿವಿಧ ಹೋರಾಟಗಳಲ್ಲಿ ಭಾಗವಹಿಸಿರುವ ಆಸಿಫ್ ಅಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೈಯದ್ ನಾಸೀರ್ ಹುಸೇನ್ ಅವರು ಈ ವೀಡಿಯೋ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ.ಬಲ್ಡೋಟಾ ಕಾರ್ಖಾನೆ ಸ್ಥಾಪನೆಯಿಂದ ಪರಿಸರ ಹಾನಿಯಾಗುವುದಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತದೆ. ತ್ಯಾಜ್ಯವನ್ನು ಸಹ ಸದ್ಬಳಕೆ ಮಾಡುವುದರಿಂದ ಇಲ್ಲಿ ತ್ಯಾಜ್ಯದ ಪ್ರಶ್ನೆಯೇ ಬರುವುದಿಲ್ಲ ಎಂದು ರಮೇಶ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ನಾವು ಈಗಾಗಲೇ ಬಡ್ಡಿರಹಿತ ಸಾಲವನ್ನು ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ನೀಡುತ್ತಿದ್ದೇವೆ. ಇದನ್ನು ಕೊಪ್ಪಳ ತಾಲೂಕಿನ ಹಾಲವರ್ತಿ ಮತ್ತು ಹಿರೇಬಗನಾಳ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ. ಕೊಪ್ಪಳ ತಾಲೂಕಿನಾದ್ಯಂತ ವಿಸ್ತರಣೆ ಮಾಡಲಾಗುವುದು. ಸ್ಲಂ ಪ್ರದೇಶಗಳಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಈ ಬಡ್ಡಿರಹಿತ ಸಾಲ ನೀಡುವುದಾಗಿ ಹೇಳಿದ್ದಾರೆ.
ಈ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಅವರು, ಹೌದು, ಘೋಷಣೆ ಮಾಡಿದ್ದು ನಿಜ. ಈಗಾಗಲೇ ನಾವು 180 ಸ್ವಸಹಾಯ ಸಂಘಗಳಿಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನೀಡುತ್ತಿದ್ದೇವೆ. ಕೊಪ್ಪಳ ತಾಲೂಕಿನ ನಾಲ್ಕಾರು ಹಳ್ಳಿಗಳಲ್ಲಿ ನೀಡುತ್ತಿದ್ದೇವೆ. ಇದನ್ನೇ ಈಗ ಕೊಪ್ಪಳ ತಾಲೂಕಿನಾದ್ಯಂತ ವಿಸ್ತರಣೆ ಮಾಡಲಾಗುವುದು, ಸ್ಲಂ ಏರಿಯಾಗಳಿಗೆ ಆದ್ಯತೆ ನೀಡಿ, ಬಡ್ಡಿರಹಿತ ಸಾಲವನ್ನು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ನೀಡಲಾಗುವುದು ಎಂದರು.ಸಾಲದ ಮಿತಿ ಆಯಾ ಸಂಘದ ಸಾಮರ್ಥ್ಯ ಮತ್ತು ಮಹಿಳೆಯರ ಹಣ ಬಳಕೆಯ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಇದುವರೆಗೂ ಗರಿಷ್ಠ ಒಂದೂವರೆ ಲಕ್ಷ ರುಪಾಯಿ ಬಡ್ಡಿ ರಹಿತ ಸಾಲ ನೀಡಿದ್ದೇವೆ ಎಂದರು.
ವ್ಯಾಪಕ ಆಕ್ರೋಶ: ಬಲ್ಡೋಟಾ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 200 ದಿನ ದಾಟಿರುವ ಹೊತ್ತಲ್ಲೆ ಬಲ್ಡೋಟಾ ಸಂಸ್ಥೆಯ ರಮೇಶ ಅವರು ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವ ಮಾಹಿತಿ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರ ಅವರು ಇದೆಲ್ಲವೂ ಹೋರಾಟ ಹತ್ತಿಕ್ಕುವ ಷಡ್ಯಂತ್ರವಾಗಿದೆ ಎಂದು ಅವರ ವಿರುದ್ಧ ಕಿಡಿಕಾರಿದ್ದಾರೆ.
ಕಾರ್ಖಾನೆಯ ಸ್ಥಾಪನೆ ವಿರೋಧಿಸಿ ಹೋರಾಟ ನಡೆಯುತ್ತಿರುವ ವೇಳೆಯಲ್ಲಿ ಅದೇ ಕಂಪನಿಯಿಂದ ವಾಟರ್ ಫಿಲ್ಟರ್ ಕಾಣಿಕೆ ಪಡೆಯುವುದು ತಪ್ಪು. ಇದನ್ನು ಯಾವುದೇ ಧರ್ಮದವರು ಸ್ವೀಕಾರ ಮಾಡಬಾರದು ಎಂದಿದ್ದಾರೆ. ಇದಷ್ಟೇ ಅಲ್ಲ, ಹೋರಾಟಗಾರರಿಗೂ ಆಮಿಷವೊಡ್ಡಿ ಟೆಂಟ್‌ಗೆ ಬರದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.