ಕೊಪ್ಪಳ ನಗರದ ನಗರಸಭೆ ಮುಂಭಾಗದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸುತ್ತಿರುವ ಬಲ್ಡೋಟ ಇತರ ಕಾರ್ಖಾನೆಗಳ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ನಡೆಸಿರುವ ಅನಿರ್ದಿಷ್ಟಾವಧಿ ಧರಣಿಯ 151ನೇ ದಿನದ ಹೋರಾಟದ ವೇದಿಕೆಯಲ್ಲಿ ಜೈನ ತೀರ್ಥಂಕರ ಮಹಾವೀರರ ಜಯಂತಿ ಆಚರಿಸಲಾಯಿತು.

ಕೊಪ್ಪಳ: ಅಹಿಂಸೆ ಪರಮೋಧರ್ಮಃ ಎಂದ ಜೈನ ಸಮುದಾಯದ ಬಲ್ಡೋಟ ಸಂಸ್ಥೆ ಮನುಷ್ಯರ ಕೊಲೆ ಮಾಡಲು ಹೊರಟಿರುವುದು ಅತ್ಯಂತ ಖೇದಕರ ಮತ್ತು ವಿಷಾದ ಸಂಗತಿ ಎಂದು ನಿವೃತ್ತ ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ನಗರಸಭೆ ಮುಂಭಾಗದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸುತ್ತಿರುವ ಬಲ್ಡೋಟ ಇತರ ಕಾರ್ಖಾನೆಗಳ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ನಡೆಸಿರುವ ಅನಿರ್ದಿಷ್ಟಾವಧಿ ಧರಣಿಯ 151ನೇ ದಿನದ ಹೋರಾಟದ ವೇದಿಕೆಯಲ್ಲಿ ಜೈನ ತೀರ್ಥಂಕರ ಮಹಾವೀರರ ಜಯಂತಿ ಆಚರಿಸಿ ಅವರು ಮಾತನಾಡಿದರು.

ಬಲ್ಡೋಟ ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ಇಲ್ಲಿನ ಲಕ್ಷಾಂತರ ಜನರ ಬದುಕಿಗೆ ಕೊಳ್ಳಿ ಇಡಲು ಹೊರಟಿರುವುದು ನೋವಿನ ಸಂಗತಿ. ಜಗತ್ತಿನ ಇತಿಹಾಸದಲ್ಲಿ ಮಹಾವೀರರು ಸತ್ಯ, ಅಹಿಂಸೆ, ಸಂಯಮ, ತ್ಯಾಗವನ್ನು ಮನುಷ್ಯ ಅಳವಡಿಸಿಕೊಳ್ಳಬೇಕು ಎಂದು ಹೇಳಿದವರು.

ಆದರೆ ನಾವು ಐದು ತಿಂಗಳಿನಿಂದ ನಿರಂತರ ಧರಣಿ ಮಾಡುತ್ತಿರುವುದನ್ನು ನೋಡಿಯೂ ಆ ರೀತಿ ನಡೆದುಕೊಳ್ಳುತ್ತಿರುವುದು ಅತ್ಯಂತ ಸೋಜಿಗದ ಸಂಗತಿ. ಭಾರತದ ನಾಗರಿಕತೆ ಒಂದೇ ಸಮನೆ ಬಂದಿಲ್ಲ, ಅದು ಸುದೀರ್ಘ ಇತಿಹಾಸ. ಎಲ್ಲರನ್ನು ಹತ್ತಿರ ತರುವ ಕೆಲಸ ಮಾಡಿದ ತೀರ್ಥಂಕರರು ಬೇಗ ಬುದ್ಧಿ ಕೊಡಲಿ ಎಂದು ಹೇಳಿದರು.

ಡಾ. ಮಂಜುನಾಥ ಸಜ್ಜನ್ ಮಾತನಾಡಿದರು. ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಬಿ.ಜಿ. ಕರಿಗಾರ, ಜ್ಯೋತಿ ಎಂ. ಗೊಂಡಬಾಳ, ಸರೋಜಾ ಬಾಕಳೆ, ಕಾವ್ಯಾ ಗಡಾದ, ರತ್ನಮ್ಮ ದೊಡ್ಡಮನಿ, ಗಾಳೆಪ್ಪ ಎಸ್. ಕಡೆಮನಿ, ರವಿ ಕಾಂತನವರ, ಮೂಕಪ್ಪ ಮೇಸ್ತ್ರಿ ಬಸಾಪುರ, ವಿಜಯ ಮಹಾಂತೇಶ ಹಟ್ಟಿ, ಬಸವರಾಜಪ್ಪ ಶೆಟ್ಟರ್, ಪಂಪಣ್ಣ ಚಿಂತಪಲ್ಲಿ, ವೈ. ಸತ್ಯನಾರಾಯಣ, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ, ರೇವಣಸಿದ್ದಯ್ಯ ಚಿತ್ರಗಾರ, ಎಸ್.ಎಸ್.ಕೆ. ಮಹಿಳಾ ಸಂಘದ ಮಂಜುಳಾ ಕಾಟವೆ ಭಾಗವಹಿಸಿದ್ದರು.