ಬಾಳೆಹೊನ್ನೂರು ಪಿಎಸಿಎಸ್ ಚುನಾವಣೆ ಪೂರ್ಣ: ಫಲಿತಾಂಶ ಬಾಕಿ

| Published : Feb 04 2025, 12:33 AM IST

ಬಾಳೆಹೊನ್ನೂರು ಪಿಎಸಿಎಸ್ ಚುನಾವಣೆ ಪೂರ್ಣ: ಫಲಿತಾಂಶ ಬಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯು ಸಂಜೆ ವೇಳೆಗೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಘೋಷಣೆ ಮಾಡದೆ ಕಾಯ್ದಿರಿಸಲಾಗಿದೆ.

ರಿಸಲ್ಟ್‌ನತ್ತ ಚಿತ್ತ । ಫೆ.2ರಂದು ಪೂರ್ಣಗೊಂಡ ಕೃಷಿ ಸಂಘದ ಎಲೆಕ್ಷನ್‌ । 7 ಬಿಜೆಪಿ, 5 ಕಾಂಗ್ರೆಸ್ ಬೆಂಬಲಿತರು ಮುನ್ನಡೆ । ಕೋರ್ಟ್‌ ತೀರ್ಪಿನ ಬಳಿಕ ಪ್ರಕಟ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯು ಸಂಜೆ ವೇಳೆಗೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಘೋಷಣೆ ಮಾಡದೆ ಕಾಯ್ದಿರಿಸಲಾಗಿದೆ.

ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಲರಹಿತ ಕ್ಷೇತ್ರದಲ್ಲಿ 253 ಅರ್ಹ ಮತದಾರರಿದ್ದು, 98 ಜನ ಅನರ್ಹ ಮತದಾರು ಕೋರ್ಟ್ ಮೂಲಕ ಮತದಾನಕ್ಕೆ ಹಕ್ಕು ಪಡೆದಿದ್ದರು. ಈ ಪೈಕಿ 236 ಅರ್ಹ ಮತದಾರರು, ಕೋರ್ಟ್ ಮೂಲಕ ಹಕ್ಕು ತಂದವರು 82 ಮತದಾರರು ಮತ ಚಲಾಯಿಸಿದ್ದರು. ಈ ಕ್ಷೇತ್ರದಲ್ಲಿ 1 ನಿರ್ದೇಶಕ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸಾಲಗಾರ ಕ್ಷೇತ್ರದಲ್ಲಿ 296 ಅರ್ಹ ಮತದಾರರಿದ್ದು, 57 ಅನರ್ಹ ಮತದಾರರು ಕೋರ್ಟ್ ಮೂಲಕ ಮತದಾನಕ್ಕೆ ಹಕ್ಕು ಪಡೆದಿದ್ದರು. ಈ ಪೈಕಿ 286 ಅರ್ಹ ಮತದಾರರು, ಕೋರ್ಟ್ ಮೂಲಕ ಹಕ್ಕು ತಂದವರು 54 ಮತದಾರರು ಮತ ಚಲಾಯಿಸಿದ್ದರು. ಈ ಕ್ಷೇತ್ರದಲ್ಲಿ 10 ನಿರ್ದೇಶಕ ಸ್ಥಾನಕ್ಕೆ 29 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಅನರ್ಹತೆ ಹೊಂದಿದ್ದ 154 ಮತದಾರರು ಹೈಕೋರ್ಟ್ ಮೂಲಕ ಮತದಾನದ ಹಕ್ಕು ಪಡೆದು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 154 ಜನರಿಗೂ ಮತದಾನದ ಹಕ್ಕು ದೊರೆತಿತ್ತು. ಆದರೆ ಈ ಪೈಕಿ 135 ಅನರ್ಹರು ಮತ ಚಲಾಯಿಸಿದ್ದರು. ಆದರ ತಕರಾರು ಅರ್ಜಿಯ ವಿಚಾರಣೆ, ತೀರ್ಪನ್ನು ಫೆ.13ಕ್ಕೆ ಕಾಯ್ದಿರಿಸಿದ್ದು, ಅಂದು ವಿಚಾರಣೆ ನಡೆಯಯುವ ಅಥವಾ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಚುನಾವಣಾಧಿಕಾರಿ ಕೆಎಂಸಿ ವಸಂತ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ ಎಣಿಕೆ ನಡೆಸಿ, ಕೋರ್ಟ್ ತೀರ್ಪಿಗಾಗಿ ಕಾಯ್ದಿರುವುದಾಗಿ ಮಾಹಿತಿ ನೀಡಿದ್ದಾರೆ.

7 ನಿರ್ದೇಶಕ ಸ್ಥಾನಗಳಲ್ಲಿ ಹಾಲಿ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ನೇತೃತ್ವದ ಬಿಜೆಪಿ ತಂಡ ಮುನ್ನಡೆಯನ್ನು, ಹಾಲಿ ನಿರ್ದೇಶಕ ಎಂ.ಎಸ್.ಅರುಣೇಶ್ ನೇತೃತ್ವದ ಕಾಂಗ್ರೆಸ್ ತಂಡ 5 ನಿರ್ದೇಶಕ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ಹೈಕೋರ್ಟ್ ತೀರ್ಪಿನ ಬಳಿಕವೂ ಇದೇ ಫಲಿತಾಂಶದ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಮುನ್ನಡೆಯಲ್ಲಿರುವ ಅಭ್ಯರ್ಥಿಗಳು ಖಚಿತಪಡಿಸಿದ್ದು, ಎರಡೂ ಪಕ್ಷಗಳಿಂದ ಮುನ್ನಡೆಯಲ್ಲಿದ್ದ ಅಭ್ಯರ್ಥಿಗಳು, ಕಾರ್ಯಕರ್ತರು ಮತ ಎಣಿಕೆ ಪೂರ್ಣಗೊಂಡ ಬಳಿಕ ಸಹಕಾರ ಸಂಘದ ಹೊರಭಾಗದಲ್ಲಿ ಪರಸ್ಪರ ಅಭಿನಂದಿಸಿಕೊಂಡರು.

ಈಗಾಗಲೇ ಮತ ಎಣಿಕೆಯಲ್ಲಿರುವ ಮತಗಳಂತೆ ಫಲಿತಾಂಶ ಪ್ರಕಟಗೊಂಡಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ಚುಕ್ಕಾಣಿ ಹೆಚ್ಚು ನಿರ್ದೇಶಕ ಸ್ಥಾನ ಪಡೆದ ಬಿಜೆಪಿ ಬೆಂಬಲಿತರ ಪಾಲಾಗಲಿದೆ. 5 ಸ್ಥಾನ ಪಡೆದು ಅಧಿಕಾರದಿಂದ ಕಾಂಗ್ರೆಸ್ ವಂಚಿತರಾದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಒಂದೂ ಸ್ಥಾನವನ್ನು ಪಡೆಯದೆ ಹಿನ್ನಡೆ ಅನುಭವಿಸಿದಂತಾಗಲಿದೆ.