ಸಾರಾಂಶ
ಕೆ.ಆರ್.ಪೇಟೆ ಪಟ್ಟಣದ ಕದಂಬ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಸಂಧ್ಯಾ, ಯೋಗೇಶ್ವರಿ ಹಾಗೂ ನಿತ್ಯ ಎಂಬ ವಿದ್ಯಾರ್ಥಿನಿಯರು ಕಾಲೇಜು ಹಂತದ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಕದಂಬ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಸಂಧ್ಯಾ, ಯೋಗೇಶ್ವರಿ ಹಾಗೂ ನಿತ್ಯ ಎಂಬ ವಿದ್ಯಾರ್ಥಿನಿಯರು ಕಾಲೇಜು ಹಂತದ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕಾಲೇಜಿನ ವಿದ್ಯಾರ್ಥಿನಿಯರಾದ ಸ್ನೇಹ, ಸಂಧ್ಯಾ, ಯೋಗೇಶ್ವರಿ, ಸಿಂಧು, ಪೂರ್ಣಿಮಾ, ರೂಪ ಮತ್ತು ನಿತ್ಯ ಅವರ ತಂಡವು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.
ರಾಜ್ಯ ಮಟ್ಟದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ರನ್ನರ್ ಆಗಿದ್ದಾರೆ. ರನ್ನರ್ ತಂಡದಲ್ಲಿದ್ದ ಕಾಲೇಜಿನ ಸಂಧ್ಯಾ, ಯೋಗೇಶ್ವರಿ ಹಾಗೂ ನಿತ್ಯ ಎಂಬ ವಿದ್ಯಾರ್ಥಿನಿಯರು ತಮ್ಮ ಅತ್ಯುತ್ತಮ ಆಟ ಪ್ರದರ್ಶನಿದಿಂದ ಕೂಟದಲ್ಲಿ ಗಮನ ಸೆಳೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿಯ ಡಿ.ಜೆ.ಕಿರಣ್ ಹಾಗೂ ಬಿ.ಸಿ.ಕೃಷ್ಣ ತಿಳಿಸಿದ್ದಾರೆ.ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಯರ ತಂಡವನ್ನು ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಅಭಿನಂಧಿಸಿದೆ.ಜಯಕೀರ್ತಿಗೆ ಪಿಎಚ್.ಡಿ ಪದವಿ
ಕೆ.ಆರ್.ಪೇಟೆ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಯಕೀರ್ತಿ ಅವರಿಗೆ ಚೆನ್ನೈನ ಮದ್ರಾಸ್ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ತಮಿಳ್‌ಸೆಲ್ವಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾಧರ ಪಡಿಸಿದ ಡಾ.ಪ್ರೀತಿ ಶುಭಚಂದ್ರ ಅವರ ಸಮಗ್ರ ಸಾಹಿತ್ಯ ಒಂದು ವಿಶ್ಲೇಷಣೆ ಎಂಬ ಮಹಾ ಪ್ರಬಂಧವನ್ನು ಮದ್ರಾಸ್ ವಿಶ್ವವಿದ್ಯಾಲಯವು ಅಂಗೀಕರಿಸಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ.
ತಾಲೂಕಿನ ಹರಿಹರಪುರ- ಕುರ್‍ನೇನಹಳ್ಳಿ ಗ್ರಾಮದ ನಿಂಗೇಗೌಡ ಹಾಗೂ ಇಂದ್ರಮ್ಮ ದಂಪತಿ ಪುತ್ರ ಜಯಕೀರ್ತಿ ಕಳೆದ 5 ವರ್ಷಗಳಿಂದ ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪಿಎಚ್.ಡಿ ಪದವಿ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ಸಹಾಯಕ ಪ್ರಾಧ್ಯಾಪಕ ಜಯಕೀರ್ತಿ ಅವರನ್ನು ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದ ಅಭಿನಂಧಿಸಿದೆ.