ಸಾರಾಂಶ
ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.ದೇವಿಯನ್ನು ರಾಟೆಯ ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ಆಚರಣೆಯಲ್ಲಿ ಊರಿನ ಪರ ಊರಿನ ಭಕ್ತರು ಪಾಲ್ಗೊಂಡಿದ್ದರು.
ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ದೇವಾಲಯದಲ್ಲಿ ಈ ಉತ್ಸವಕ್ಕಾಗಿ ದೇವಾಲಯದ ಮುಂಭಾಗದಲ್ಲಿ ದೊಡ್ಡ ಕಬ್ಬಿಣದ ರಾಟೆಯಲ್ಲಿ ದೇವರ ವಿಗ್ರಹವನ್ನು ತೂಗಲಾಗುತ್ತದೆ. ಈ ಸಂದರ್ಭ ಭಕ್ತರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಉತ್ಸವದ ಅಂಗವಾಗಿ ಭದ್ರಕಾಳಿ ದೇವಿಯ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವುದು ಮಾತ್ರವಲ್ಲದೆ ಮೂರು ತೆರೆ ಮುಡಿ ಕೋಲಗಳು ದೇವಾಲಯದ ಮೈದಾನದಲ್ಲಿ ನೆರವೇರಿತು. ಈ ಸಂದರ್ಭ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ವೀಕ್ಷಿಸಿ ಸಂಭ್ರಮಿಸಿದರು.