ಬಳ್ಳಾರಿ ಜಿಲ್ಲೆಯಲ್ಲೂ ಈಗ ಹಕ್ಕಿಜ್ವರ ಭೀತಿ - ಜಿಲ್ಲೆಯಲ್ಲಿ 4000ಕ್ಕೂ ಹೆಚ್ಚು ಕೋಳಿಗಳ ಸಾವು

| N/A | Published : Mar 01 2025, 07:56 AM IST

pet cats bird flu virus

ಸಾರಾಂಶ

ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳ ಬಳಿಕ ಗಡಿ ಜಿಲ್ಲೆ ಬಳ್ಳಾರಿಯಲ್ಲೂ ಕೋಳಿಜ್ವರದ ಆತಂಕ ಮನೆಮಾಡಿದೆ. ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಕೋಳಿಗಳು ಮರಣ ಹೊಂದಿದ್ದು, ಹಕ್ಕಿಜ್ವರದ ಶಂಕೆ ಮೂಡಿದೆ.

 ಬಳ್ಳಾರಿ : ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳ ಬಳಿಕ ಗಡಿ ಜಿಲ್ಲೆ ಬಳ್ಳಾರಿಯಲ್ಲೂ ಕೋಳಿಜ್ವರದ ಆತಂಕ ಮನೆಮಾಡಿದೆ. ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಕೋಳಿಗಳು ಮರಣ ಹೊಂದಿದ್ದು, ಹಕ್ಕಿಜ್ವರದ ಶಂಕೆ ಮೂಡಿದೆ. ಈ ಮಧ್ಯೆ, ಕೋಳಿಜ್ವರ ಪತ್ತೆಯಾದ ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಮತ್ತೆ 8 ಕೋಳಿಗಳು ಸಾವನ್ನಪ್ಪಿದ್ದು, ಗ್ರಾಮವನ್ನು ಹಕ್ಕಿಜ್ವರ ಬಾಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅಲ್ಲದೆ, ಗ್ರಾಮದ 1 ಕಿ.ಮೀ. ವ್ಯಾಪ್ತಿಯಲ್ಲಿನ ಕೋಳಿಗಳ ನಾಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ ಬಳಿಯ ಕುರೇಕುಪ್ಪ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿ ಕೆಲವು ದಿನಗಳ ಹಿಂದೆ ಕೆಲ ಕೋಳಿಗಳು ಮೃತಪಟ್ಟಿದ್ದವು. ಪ್ರಯೋಗಾಲಯದ ವರದಿ ಬಳಿಕ ಇವುಗಳಲ್ಲಿ ಎಚ್5ಎನ್1 ವೈರಸ್‌ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಕೇಂದ್ರದಲ್ಲಿ ಸುಮಾರು 2 ಸಾವಿರ ಕೋಳಿಗಳನ್ನು ನಾಶಪಡಿಸಲಾಗಿತ್ತು.

ಇದರ ಬೆನ್ನಲ್ಲೇ ಜಿಲ್ಲೆಯ ವಿವಿಧ ಕೋಳಿಫಾರಂಗಳಲ್ಲಿ 4 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು, ಇವುಗಳು ಕೂಡ ಹಕ್ಕಿಜ್ವರದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೃತಕೋಳಿಗಳ ಕಳೆಬರವನ್ನು ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಆಂಧ್ರ, ತೆಲಂಗಾಣ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಹೊರ ರಾಜ್ಯಗಳ ಕೋಳಿಗಳು ಹಾಗೂ ಮೊಟ್ಟೆಗಳು ಜಿಲ್ಲೆಗೆ ಸರಬರಾಜು ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ತಿಳಿಸಿದ್ದಾರೆ.

ಬಾಧಿತ ಪ್ರದೇಶ:

ಈ ಮಧ್ಯೆ, ಹಕ್ಕಿಜ್ವರ ಪತ್ತೆಯಾದ ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಮತ್ತೆ 8 ಕೋಳಿಗಳು ಮೃತಪಟ್ಟಿದ್ದು, ಗ್ರಾಮದ ಸುತ್ತಮುತ್ತಲ 1 ಕಿ.ಮೀ.ವ್ಯಾಪ್ತಿಯ ಪ್ರದೇಶವನ್ನು ಹಕ್ಕಿಜ್ವರ ಬಾಧಿತ ಪ್ರದೇಶ ಎಂದು ಘೋಷಿಸಲಾಗಿದೆ.

ಈ ಭಾಗದಲ್ಲಿ ಕೋಳಿ ಸಾಗಣೆ, ಕೋಳಿ ಮಾಂಸ ಸೇವನೆ ನಿಷೇಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೋಂಕು ನಿವಾರಕಗಳನ್ನು ಸಿಂಪಡಿಸಲಾಗಿದೆ. ಸುತ್ತಮುತ್ತ ಇರುವ ಕೋಳಿಫಾರಂಗಳಲ್ಲಿನ ಕೋಳಿಗಳ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಹಕ್ಕಿಜ್ವರ ಧೃಡಪಟ್ಟರೆ ಅವುಗಳನ್ನು ಸಾಮೂಹಿಕವಾಗಿ ನಾಶಪಡಿಸಿ, ಅವುಗಳ ಕಳೆಬರವನ್ನು ವೈಜ್ಞಾನಿಕವಾಗಿ ಗುಂಡಿ ತೋಡಿ ಮುಚ್ಚಲಾಗುವುದು. ಈ ಕುರಿತು ಸಿದ್ಧತೆ ಮಾಡಿಕೊಳ್ಳುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದ್ದಾರೆ.

ನಿಷೇಧಕ್ಕೆ ಏಕೆ ಬೇಡಿಕೆ?

- ಚಿಕ್ಕಬಳ್ಳಾಪುರದ ವರದಹಳ್ಳಿ ಬಳಿಕ ಬಳ್ಳಾರಿ ಜಿಲ್ಲೆಯಲ್ಲೂ 4000ಕ್ಕೂ ಹೆಚ್ಚು ಕೋಳಿ ಸಾವು

- ಹಕ್ಕಿ ಜ್ವರದಿಂದಲೇ ಕೋಳಿ ಸಾವನ್ನಪ್ಪಿರುವ ಶಂಕೆ. ಆಂಧ್ರ, ತೆಲಂಗಾಣ ಗಡೀಲಿ ಕಟ್ಟೆಚ್ಚರ

- ಚಿಕ್ಕಬಳ್ಳಾಪುರ ಜಿಲ್ಲೆ ವರದಹಳ್ಳಿ ಗ್ರಾಮದಲ್ಲಿ ಯಲ್ಲಿ ಮತ್ತೆ 8 ಕೋಳಿಗಳ ಸಾವು, ಆತಂಕ

- ಗ್ರಾಮದ 1 ಕಿ.ಮೀ. ವ್ಯಾಪ್ತೀಲಿ ಕೋಳಿ ನಾಶಕ್ಕೆ ಸಿದ್ಧತೆ, ಸರ್ಕಾರದಿಂದ ಅನುಮತಿ ಕೋರಿಕೆ