ಸಾರಾಂಶ
ಹೊನ್ನಾಳಿ ತಾಲೂಕಿನ ಉಪ್ಪಾರ ಸಮಾಜ ಅಧ್ಯಕ್ಷರಾಗಿದ್ದ ರೈತ ಮುಖಂಡ ಬಳ್ಳೇಶ್ವರ ಗ್ರಾಮದ ಬಿ.ಆರ್. ಷಣ್ಮುಖಪ್ಪ (57) ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ.
- ಬಸ್ ಸಂಚಾರಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಎದೆನೋವು, ಬೆನ್ನುನೋವು
- ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅವರಿಂದ ಬಸ್ ಸಂಚಾರಕ್ಕೆ ಚಾಲನೆ ಕಾರ್ಯಕ್ರಮ- ವೇದಿಕೆ ಇಳಿದು ಮನೆಗೆ ತೆರಳಿದ ಸಂದರ್ಭದಲ್ಲೇ ಸಾವು: ಶಾಸಕ, ಗ್ರಾಮಸ್ಥರ ಸಂತಾಪ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಉಪ್ಪಾರ ಸಮಾಜ ಅಧ್ಯಕ್ಷರಾಗಿದ್ದ ರೈತ ಮುಖಂಡ ಬಳ್ಳೇಶ್ವರ ಗ್ರಾಮದ ಬಿ.ಆರ್. ಷಣ್ಮುಖಪ್ಪ (57) ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ.ಬಿ.ಆರ್. ಷಣ್ಮುಖಪ್ಪ ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸರ್ಕಾರಿ ಬಸ್ ಸೌಲಭ್ಯ ಬೇಕು ಎಂದು ಪಟ್ಟುಹಿಡಿದು ಸರ್ಕಾರವನ್ನು ಒತ್ತಾಯಿಸಿದ್ದರು. ಸೋಮವಾರ ಗ್ರಾಮದಲ್ಲಿ ನೂತನ ಬಸ್ ಸಂಚಾರ ಆರಂಭಕ್ಕೂ ಕಾರಣರಾಗಿದ್ದರು. ಶಾಸಕ ಡಿ.ಜಿ. ಶಾಂತನಗೌಡ ಅವರಿಂದ ಬಸ್ ಸಂಚಾರಕ್ಕೆ ಚಾಲನೆಯನ್ನೂ ಕೊಡಿಸಿದ್ದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ್ದರು.
ಆದರೆ, ಕಾರ್ಯಕ್ರಮದಲ್ಲಿಯೇ ಅವರಿಗೆ ಬೆನ್ನುನೋವು ಹಾಗೂ ಎದೆನೋವು ಕಾಣಿಸಿಕೊಂಡಿದೆ. ವೇದಿಕೆಯಿಂದ ಇಳಿದು ಮನೆಗೆ ಹೋಗುತ್ತಿದ್ದಂತೆ ಅವರು ಕೊನೆಯುಸಿರೆಳೆದಿದ್ದಾರೆ.ಸದಾ ಗ್ರಾಮಕ್ಕಾಗಿ ಅಭಿವೃದ್ಧಿ ಕಾಳಜಿಗಳ ಕೆಲಸ ಮಾಡುತ್ತಿದ್ದ ಷಣ್ಮುಖಪ್ಪ ಅವರ ನಿಧನಕ್ಕೆ ಇಡೀ ಗ್ರಾಮದ ಜನತೆ ಶೋಕಸಾಗರದಲ್ಲಿ ಮುಳುಗಿತ್ತು. ಅವರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಿ.ಜಿ.ಶಾತನಗೌಡ, ಸಾಮಾಜಿಕ ಕಾರ್ಯಕರ್ತ ದರ್ಶನ್ ಬಳ್ಳೇಶ್ವರ, ಗ್ರಾಮದ ಮುಖಂಡರು ಗ್ರಾಮಸ್ಥರು ಮೃತ ಷಣ್ಮುಖಪ್ಪ ನಿವಾಸಕ್ಕೆ ತೆರಳಿ ಗೌರವ ಸಮರ್ಪಿಸಿ, ಸಂತಾಪ ಸೂಚಿಸಿದರು. ಸ್ವಗ್ರಾಮದ ಅವರ ತೋಟದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.- - -
-2ಎಚ್ಎಲ್.ಐ3: ಬಿ.ಆರ್. ಷಣ್ಮುಖಪ್ಪ ಬಳ್ಳೇಶ್ವರ