ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸುವಂತೆ ನಾವು ಕೇಳಿದ್ದವು. ಇದೀಗ ಚುನಾವಣಾ ಆಯೋಗವು ಅದಕ್ಕೆ ಸಮ್ಮತಿಸಿದ್ದು ಈ ಮೂಲಕ ಫಲಿತಾಂಶ ಪಾರದರ್ಶಕವಾಗಿರುತ್ತದೆ ಎಂಬ ನಂಬಿಕೆ ನಮ್ಮದು ಎಂದು ಸಂತೋಷ ಲಾಡ್‌ ಹೇಳಿದ್ದಾರೆ.

ಹುಬ್ಬಳ್ಳಿ:

ಬೆಂಗಳೂರು ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್‌ ಪೇಪರ್‌ ಮೂಲಕ ನಡೆಸಲು ತೀರ್ಮಾನಿಸಿರುವುದನ್ನು ಸಚಿವ ಸಂತೋಷ ಲಾಡ್‌ ಸ್ವಾಗತಿಸಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಎಸ್‌ಐಆರ್‌ ಮಾಡುವಾಗ ಭಾರತ ರತ್ನ ನೀಡಿದವರಿಗೂ ಇವರು ಸಿಟಿಜನ್‌ಶಿಫ್‌ ಕೇಳಿದ್ದಾರೆಂದು ಕಿಡಿಕಾರಿದರು.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸುವಂತೆ ನಾವು ಕೇಳಿದ್ದವು. ಇದೀಗ ಚುನಾವಣಾ ಆಯೋಗವು ಅದಕ್ಕೆ ಸಮ್ಮತಿಸಿದ್ದು ಈ ಮೂಲಕ ಫಲಿತಾಂಶ ಪಾರದರ್ಶಕವಾಗಿರುತ್ತದೆ ಎಂಬ ನಂಬಿಕೆ ನಮ್ಮದು ಎಂದರು.

ಎಸ್‌ಐಆರ್‌ ವಿರುದ್ಧ ಕಿಡಿ:

ಎಸ್‌ಐಆರ್‌ನಡಿ ಯುಪಿಯಲ್ಲಿ ಮೂರುವರೆ ಕೋಟಿ ಮತದಾರರನ್ನು ತೆಗೆದಿದ್ದಾರೆ. ಭಾರತ ರತ್ನ ನೀಡಿದವರಿಗೆ ಸಿಟಿಜನ್‌ಶಿಫ್‌ ಕೇಳಿದ್ದಾರೆ. ತಮಿಳನಾಡಿನಲ್ಲಿ 80 ಲಕ್ಷ ಮತದಾರರನ್ನು ತೆಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ನಾವು ಅಧಿಕಾರಕ್ಕೆ ಬಂದರೆ ದೇಶನವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಬಿಜೆಪಿ ಹೇಳಿತ್ತು. ಇದೀಗ ಬಂಗಾರ ₹ 1.50 ಲಕ್ಷ, ಬೆಳ್ಳಿ ₹ 3 ಲಕ್ಷ ದಾಟಿದೆ. ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು.

ಅಮೆರಿಕಾ ಅಧ್ಯಕ್ಷ ಟ್ರಂಪ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದರೂ ಬಿಜೆಪಿಗರು ಮಾತನಾಡುತ್ತಿಲ್ಲ. ದೇಶದ ಪ್ರಧಾನಿ ಬೈದರೂ ನಾವೇಕು ಸುಮ್ಮನಿರಬೇಕು? ಎಂದಿರುವ ಲಾಡ್‌, ಯುಪಿಎ ಅಧಿಕಾರಾವಧಿಯಲ್ಲಿ 10 ಸಾವಿರಕ್ಕೂ ಅಧಿಕ ಬಾಂಗ್ಲಾ ನುಸುಳುಕೋರನ್ನು ದೇಶದಿಂದ ಹೊರಹಾಕಲಾಗಿತ್ತು. ಇವರು ಅಧಿಕಾರಕ್ಕೆ ಬಂದು ಇಷ್ಟು ವರ್ಷವಾದರೂ 2500 ನುಸುಳುಕೋರರನ್ನು ಕಳುಹಿಸಲು ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಎಥಿನಾಲ್‌ ಎಷ್ಟು ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡದೆ ಇರುವುದರಿಂದ ಕಬ್ಬು, ಮೆಕ್ಕೆಜೋಳ ಬೆಳೆಗಾರರಿಗೆ ತೊಂದರೆಯಾಗಿದೆ. ಈ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದಿರುವ ಲಾಡ್‌, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೆ ಬಂದ ಬಳಿಕ ದೇಶದಲ್ಲಿ 13.50 ಲಕ್ಷ ಬಾಲಕಿಯರು ನಾಪತ್ತೆಯಾಗಿದ್ದಾರೆ. 60 ಲಕ್ಷ ಬಾಲಕಿಯರು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರ ಯಾವ ಕ್ರಮಕೈಗೊಂಡಿದೆ? ಎಂದು ಪ್ರಶ್ನಿಸಿದರು.

ಅಜಿತ್‌ ದೋವಲ್‌ ದೇಶದ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಮಕ್ಕಳು ಯಾವ ದೇಶದಲ್ಲಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಲಿ ಎಂದು ಸಚಿವ ಲಾಡ್‌ ಸವಾಲು ಹಾಕಿದರು.