ಮತದಾನಕ್ಕೆ ಬ್ಯಾಲೆಟ್‌ ಪೇಪರ್‌ ಸೂಕ್ತ: ದೇವಸಹಾಯಂ

| Published : Apr 13 2024, 01:46 AM IST / Updated: Apr 13 2024, 11:13 AM IST

ಸಾರಾಂಶ

ಮತದಾನಕ್ಕೆ ಎಲೆಕ್ಟ್ರಿಕ್‌ ಯಂತ್ರ ಬಳಕೆಗಿಂತ ಬ್ಯಾಲೆಟ್‌ ಪೇಪರ್‌ ಹೆಚ್ಚು ಸೂಕ್ತ ಎಂದು ನಿವೃತ್ತ ಐಎಎಸ್‌ ಅಧಿಕಾರಿ ದೇವಸಹಾಯಂ ವಾದಿಸಿದ್ದಾರೆ.

 ಬೆಂಗಳೂರು :  ಮತಪತ್ರಗಳಿಂದ ಮಾತ್ರ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯ ಎಂದು ‘ಫೋರಂ ಫಾರ್ ಎಲೆಕ್ಟೋರಲ್ ಇಂಟಿಗ್ರಿಟಿ''''''''ಯ ಸಂಚಾಲಕ, ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅ‍ವರು, ಇವಿಎಂ, ವಿವಿಪ್ಯಾಟ್ ವ್ಯವಸ್ಥೆಯು ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿಲ್ಲ. ಈ ಪದ್ಧತಿಯಲ್ಲಿ ಮತದಾರನಿಗೆ ತನ್ನ ಮತ ಚಲಾವಣೆಗೆ ಮುಂಚೆ ಚೀಟಿಯನ್ನು ಪರಿಶೀಲಿಸಲು ಅವಕಾಶ ನೀಡುವುದಿಲ್ಲ. ಕದಿಯುವುದು, ತಿರುಚುವುದು ಮತ್ತು ನಕಲಿ ಮತದಾನ ಸಾಧ್ಯತೆಗಳ ವಿರುದ್ಧ ಇದು ಯಾವುದೇ ಖಾತರಿ ನೀಡುವುದಿಲ್ಲ ಎಂದು ಹೇಳಿದರು.

ಮತಪತ್ರಗಳಿಗೆ ಪೂರಕವಾಗಿ ಯಂತ್ರ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೇ ಹೊರತು ಯಂತ್ರದ ಮೂಲಕವೇ ಪ್ರಜಾ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಒಪ್ಪಿತವಲ್ಲ. ಹೀಗಾಗಿ, ಮತಪತ್ರ ಬಳಕೆ ಹೊರತುಪಡಿಸಿ ಯಾವುದೇ ರೀತಿಯ ವ್ಯವಸ್ಥೆ ಬಳಸಿಕೊಂಡು ಚುನಾವಣೆ ನಡೆಸುವುದನ್ನು ನಾವು ಒಪ್ಪುವುದಿಲ್ಲ. ಏಕೆಂದರೆ, ಬ್ಯಾಲೆಟ್‌ ಬಾಕ್ಸ್‌ ಮತ್ತು ವಿವಿಪ್ಯಾಟ್‌ನಲ್ಲಿ ಮತವನ್ನು ತಿರುಚಲಾಗುತ್ತದೆ ಎಂದು ಹೇಳಿದರು.

ವಿವಿಪ್ಯಾಟ್ ಸ್ಲಿಪ್ ನಿಜವಾದ ಮತವಾಗಿದೆ. ಆದರೆ, ಚುನಾವಣಾ ಆಯೋಗ ಇವಿಎಂನಲ್ಲಿ ದಾಖಲಾಗುವ ಮೆಮೋರಿಯನ್ನು ಮಾತ್ರ ಎಣಿಸುತ್ತಿದೆ ವಿವಿಪ್ಯಾಟ್‌ನಿಂದ ಬರುವ ಎಲ್ಲಾ ಸ್ಲಿಪ್‌ಗಳನ್ನು ಎಣಿಸಲು ಏಕೆ ನಿರಾಕರಿಸುತ್ತಿದೆ ಎಂದು ಪ್ರಶ್ನಿಸಿದ ದೇವಸಹಾಯಂ, ಮತಯಂತ್ರಗಳನ್ನು ತಿರುಚುವ ಸಾಧ್ಯತೆ ಇರುವ ಕಾರಣ ಯುರೋಪ್ ಸೇರಿದಂತೆ ಅನೇಕ ಮುಂದುವರೆದ ರಾಷ್ಟ್ರಗಳು ಮತಪತ್ರದ ಮೂಲಕವೇ ಚುನಾವಣೆ ನಡೆಸುತ್ತವೆ ಎಂದು ಹೇಳಿದರು.

ಚುನಾವಣೆಗೆ ಬಳಸುವ ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಮತ್ತು ಅದರಲ್ಲಿರುವ ಮೈಕ್ರೋ ಕಂಟ್ರೋಲರ್‌ ಯಾರು ಪೂರೈಸುತ್ತಿದ್ದಾರೆ? ಅವುಗಳ ಮಾಡೆಲ್ ಮತ್ತು ಹೆಸರು ಏನು? ಚಿಹ್ನೆಗಳನ್ನು ಯಂತ್ರಗಳಿಗೆ ಲೋಡ್ ಮಾಡುವ ಕಾರ್ಯಾಚರಣೆ ಕೈಪಿಡಿ ಮುಂತಾದವುಗಳ ಕುರಿತು ಚುನಾವಣಾ ಆಯೋಗ ಮಾಹಿತಿ ನೀಡುತ್ತಿಲ್ಲ ಎಂದರುಚುನಾವಣೆಗೆ ಬಳಸುತ್ತಿರುವ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಎಲ್ಲಿಂದ ಬರುತ್ತವೆ ಎನ್ನುವುದರ ಬಗ್ಗೆ ಸಂಪೂರ್ಣ ಗೌಪ್ಯತೆಯನ್ನು ಕಾಪಾಡುತ್ತಿರುವುದರಿಂದ ಚುನಾವಣೆಯ ಪಾರದರ್ಶಕತೆ ಮತ್ತು ಸಮಗ್ರತೆಯ ಬಗ್ಗೆ ಅನುಮಾನಗಳ ಎದ್ದಿವೆ ಎಂದು ಹೇಳಿದರು.

ಇವಿಎಂ ಯಂತ್ರಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳ ನಿಯಂತ್ರಣದಲ್ಲಿವೆ. ಮತದಾರರ ಚೀಟಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಈ ಮೂಲಕ ಮತದಾರರ ಪಟ್ಟಿಯು ಯುಐಡಿಎಐ ಅಧೀನಕ್ಕೆ ಬಂದಿದೆ. ಹೀಗಾಗಿ, ಚುನಾವಣಾ ಆಯೋಗದ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಸ್ವತಂತ್ರವಾಗಿ ಚುನಾವಣೆ ನಡೆಯುತ್ತದೆ ಎಂದು ಹೇಳಲು ಹೇಗೆ ಸಾಧ್ಯ? ಈ ಚುನಾವಣೆ ಅಸಂವಿಧಾನಿಕ ಆಗುವುದಿಲ್ಲವೇ? ಎಂದು ದೇವಸಹಾಯಂ ಪ್ರಶ್ನಿಸಿದರು.

ಈ ಕುರಿತಾಗಿ ಮಾಹಿತಿ ಕೋರಿ ಚುನಾವಣಾ ಆಯೋಗಕ್ಕೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಉತ್ತರ ಕೇಳಲಾಗಿದೆ. ಆದರೆ, ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ, ವಕೀಲ ಮೆಹ್ಮೂದ್ ಪ್ರಚಾ ಉಪಸ್ಥಿತರಿದ್ದರು.