ಕುದೂರು: ಬೆಂಗಳೂರು ಹಾಲು ಒಕ್ಕೂಟ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುತ್ತಿದೆ. ಅಲ್ಲದೆ, ಅಮುಲ್ ಗೆ ಖಡಕ್ ಸ್ಪರ್ಧೆ ನೀಡಿ ಮೊದಲ ಸ್ಥಾನದಲ್ಲಿರುವ ಎಲ್ಲಾ ಅರ್ಹತೆಗಳತ್ತ ಪಯಣ ಆರಂಭಿಸಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಡಾ.ರಾಜಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿರುಪತಿ ದೇವಾಲಯದ ಲಡ್ಡು ತಯಾರು ಮಾಡಲು ಇನ್ನು ಮುಂದೆ ಬಮೂಲ್ ವತಿಯಿಂದ ಕೊಡಲು ಸಿದ್ದತೆ ಆಗುತ್ತಿದೆ. ನಮ್ಮ ರೈತರ ಬದುಕು ಹಸನಾಗಲೆಂದು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬಳಿ ಮಾತನಾಡಿ ರೈತರಿಗೆ ವಾರ್ಷಿಕ ಶೇ. 3ರಷ್ಟು ಬಡ್ಡಿ ದರದಲ್ಲಿ 1.90 ಲಕ್ಷ ರು.ಗಳನ್ನು ಎರಡು ಹಸುಗಳನ್ನು ಕೊಳ್ಳಲು ಕೊಡುವಂತೆ ಹೇಳಿದ್ದೇವೆ. ಇದೇ ತಿಂಗಳಾಂತ್ಯದಲ್ಲಿ ಬೃಹತ್ ರೈತ ಸಾಲ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.ಹಾಲೆಂಡ್ ಹಸುಗಳು:
ದಿನಕ್ಕೆ 70ರಿಂದ 100 ಲೀಟರ್ ಹಾಲು ಕೊಡುವ ಹಾಲೆಂಡ್ ಹಸುಗಳ ವೀರ್ಯವನ್ನು ತಂದು ಇಲ್ಲಿನ ತಳಿಗಳಿಗೆ ನೀಡುವ ಯತ್ನಕ್ಕೆ ಚಾಲನೆ ನೀಡಲಿದ್ದೇವೆ. ಅದಕ್ಕಾಗಿ ಸದ್ಯದಲ್ಲಿಯೇ ಹಾಲೆಂಡ್ ಪ್ರವಾಸ ಮಾಡುತ್ತಿದ್ದೇವೆ. ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸಿ ಹಸುಗಳಿಗೆ ವೈದ್ಯಕೀಯ ಸೌಲಭ್ಯ ಬಮೂಲ್ ಮಾಡುತ್ತಿದೆ ಎಂದು ಹೇಳಿದರು.ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲ. ಯುಗಾದಿ ಬೋನಸ್ ರೂಪದಲ್ಲಿ ಒಟ್ಟು 60 ಕೋಟಿ ರು. ಹೈನುಗಾರರ ಬ್ಯಾಂಕ್ ಖಾತೆಗಳಿಗೆ ಹಾಕಿರುವ ಹಾಲಿನ ದರಕ್ಕೆ ಹೆಚ್ಚುವರಿಯಾಗಿ ಸೇರಿಸಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 16 ಒಕ್ಕೂಟಗಳಿದ್ದು ಅದರಲ್ಲಿ ಬೆಂಗಳೂರು ಒಕ್ಕೂಟ ಮೊದಲ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಒಕ್ಕೂಟಗಳ 19 ಸಾವಿರ ಹಸುಗಳಲ್ಲಿ 800 ಹಸುಗಳು ಬಂಜೆಯಾಗಿವೆ. ಅದಕ್ಕಾಗಿ ಆ ಹಸುಗಳು ಹೆಣ್ಣು ಕರುಗಳನ್ನೇ ಹಾಕುವಂತಹ ಗರ್ಭಧರಿಸುವ ಔಷಧವನ್ನು ರೈತರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಬಾದಾಮಿ ಹಾಲು:
ಬುಧವಾರ ಪರೀಕ್ಷೆ ಆರಂಭವಾಗುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಿಸಿ ಬಾದಾಮಿ ಹಾಲು ನೀಡುವ, ಶಾಲಾ ಮಕ್ಕಳ ಕೊಠಡಿಗಳಿಗೆ ಪೀಠೋಪಕರಣ ವ್ಯವಸ್ಥೆ ಮಾಡಿದ್ದೇವೆ. ಬಮೂಲ್ ರೈತರ ಪರವಾಗಿ ಕೆಲಸ ಮಾಡುತ್ತಾ ನಂಬಿಕೆಗೆ ಅರ್ಹರಾಗಿದ್ದೇವೆ ಎಂದು ರಾಜಣ್ಣ ತಿಳಿಸಿದರು.17ಕೆಆರ್ ಎಂಎನ್ 5.ಜೆಪಿಜಿ
ಕುದೂರು ಗ್ರಾಮದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಡಾ.ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.-