ದಾಬಸ್‍ಪೇಟೆ: ಕಳೆದ ಆರು ವರ್ಷಗಳಿಂದ 14.5 ಕೋಟಿ ನಷ್ಟದಲ್ಲಿದ್ದ ಬಮೂಲ್ ಸಂಸ್ಥೆಯನ್ನು ಡಿ.ಕೆ.ಸುರೇಶ್ ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲೇ 60 ಕೋಟಿ ಲಾಭದತ್ತ ತಂದಿರುವುದು ಹೆಮ್ಮೆಯ ವಿಚಾರ ಎಂದು ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ ತಿಳಿಸಿದರು
ದಾಬಸ್‍ಪೇಟೆ: ಕಳೆದ ಆರು ವರ್ಷಗಳಿಂದ 14.5 ಕೋಟಿ ನಷ್ಟದಲ್ಲಿದ್ದ ಬಮೂಲ್ ಸಂಸ್ಥೆಯನ್ನು ಡಿ.ಕೆ.ಸುರೇಶ್ ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲೇ 60 ಕೋಟಿ ಲಾಭದತ್ತ ತಂದಿರುವುದು ಹೆಮ್ಮೆಯ ವಿಚಾರ ಎಂದು ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ ತಿಳಿಸಿದರು.
ಸೋಂಪುರ ಹೋಬಳಿಯ ವೀರಸಾಗರ ಗ್ರಾಮದಲ್ಲಿ ಬಮೂಲ್ ನಿರ್ಮಿಸಿರುವ ಹೈಮಾಸ್ಟ್ ಬೀದಿ ದೀಪಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ನಿರ್ದೇಶಕರಾದ ಮೊದಲ ಸಭೆಯಲ್ಲಿ ನಷ್ಟದಲ್ಲಿದ್ದ ಬಮೂಲ್ ಸಂಸ್ಥೆಯನ್ನು ನಿಭಾಯಿಸಲು ರೈತರ ಹಾಲಿನ ದರದಲ್ಲಿ 2 ರು. ಕಡಿತಗೊಳಿಸಬೇಕು ಹಾಗೂ ಪಶು ಆಹಾರದ ಬೆಲೆ 500 ರು. ಹೆಚ್ಚಳ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದಾಗ ಅದನ್ನು ಎಲ್ಲಾ ನಿರ್ದೇಶಕರು ತಿರಸ್ಕರಿಸಿ, ಬಮೂಲ್‌ನಲ್ಲಾಗುತ್ತಿದ್ದ ಸೋರಿಕೆ ತಡೆದಾಗ ಸಂಸ್ಥೆಗೆ ಲಾಭ ಬಂದಿದೆ ಎಂದು ಹೇಳಿದರು.ಒಂದು ಲೀ.ಗೆ ಒಂದು ರು. ಪ್ರೋತ್ಸಾಹ ಧನ: ಲಾಭದ ಹಣವನ್ನು ರೈತರಿಗೆ ಪ್ರೋತ್ಸಾಹ ಧನ ನೀಡಲು ಚಿಂತನೆ ನಡೆದಿದ್ದಾಗ ಬಮೂಲ್ ಸಿಬ್ಬಂದಿ ವರ್ಗದವರು ಆರು ವರ್ಷದಿಂದ ನಮಗೆ ಡಿಎ ಕೊಟ್ಟಿಲ್ಲ. ಇದೀಗ ನೀಡಬೇಕೆಂದು ಒತ್ತಾಯಿಸಿದರೂ ಸಹ ಮೊದಲ ಬಾರಿಗೆ ರೈತರಿಗೆ ನೀಡೋಣ ನಂತರ ನಿಮಗೆ ನೀಡುತ್ತೇವೆಂದು ಭರವಸೆ ನೀಡಿದ್ದೇವೆ. ಬಂದ ಲಾಭದಲ್ಲಿ ಒಂದು ವರ್ಷದ ಹಾಲಿನ ಪ್ರಮಾಣಕ್ಕೆ ಒಂದು ಲೀಟರ್ ಒಂದು ರು. ಪ್ರೋತ್ಸಾಹ ಧನ ನೀಡಿದ್ದೇವೆ ಎಂದರು.
ರೈತರ ಪರ ಕೆಲಸ:ನಾನು ನಿರ್ದೇಶಕನಾದ ಮೇಲೆ ಸದಸ್ಯರ ನಿಧಿಯಿಂದ ಮರಣ ಹೊಂದಿದವರಿಗೆ, ನಿವೃತ್ತಿ ಹೊಂದಿದವರಿಗೆ 84 ಲಕ್ಷ ಪರಿಹಾರ ಒದಗಿಸಿದ್ದೇನೆ. ಸುಮಾರು 5 ಲಕ್ಷ ರು.ಗಳವರೆಗೆ ನಿವೃತ್ತಿ ವೇತನ ಕೊಡಿಸಿದ್ದೇನೆ. ಅದಲ್ಲದೆ ಸುಮಾರು 12 ಲಕ್ಷ ವೆಚ್ಚದಲ್ಲಿ 14 ಹೈಮಾಸ್ಟ್ ಬೀದಿ ದೀಪಗಳು, ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳು, ಕೆಲವೆಡೆ ಪೀಠೋಪಕರಣಗಳನ್ನು ಒದಗಿಸಿದ್ದೇನೆ ಎಂದು ಹೇಳಿದರು.
ರೈತರಿಗೆ ಪ್ರೋತ್ಸಾಹ ಧನ ಸೇರಿ ಒಂದು ಲೀಟರ್ ಗೆ 42 ರು.ಗಳನ್ನು ಒಂದು ಲೀಟರ್‌ಗೆ ನೀಡುತ್ತಿದ್ದೇವೆ. ರೈತರ ಸಂಕಷ್ಟಗಳನ್ನು ಅರಿತು 3 ಲಕ್ಷದಿಂದ 15 ಲಕ್ಷದವರೆಗೆ ವಾರ್ಷಿಕ 3ರಷ್ಟು ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 2 ರು. ಪ್ರೋತ್ಸಾಹಧನ ನೀಡಲು ಯೋಜನೆ ಮಾಡಿದ್ದೇವೆ ಎಂದರು.ಈ ವೇಳೆ ಕರವೇ ಅಧ್ಯಕ್ಷ ವೀರಸಾಗರ ಮಂಜುನಾಥ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಗಂಗರುದ್ರಯ್ಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಬೈರೇಶ್, ಚಂದ್ರಶೇಖರ್, ಮುಖಂಡರಾದ ಬಿ.ಪಿ.ಶ್ರೀನಿವಾಸ್, ಮನೋಹರ್, ಮಹೇಶ್, ಕುಮಾರ್, ಹನುಮಂತರಾಜು, ಬಮೂಲ್ ರಮೇಶ್, ಡೇರಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪೋಟೋ 1 : ಸೋಂಪುರ ಹೋಬಳಿಯ ವೀರಸಾಗರ ಗ್ರಾಮದಲ್ಲಿ ಬಮೂಲ್ ನಿರ್ಮಿಸಿರುವ ಹೈಮಾಸ್ಟ್ ಬೀದಿ ದೀಪಕ್ಕೆ ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ ಚಾಲನೆ ನೀಡಿದರು.