ಡಿಜೆ ಬಳಕೆಗೆ ತಡೆ: ಗಣೇಶನ ವಿಸರ್ಜಿಸದ ಮೋಟೆಬೆನ್ನೂರು ಗ್ರಾಮಸ್ಥರು

| Published : Sep 01 2025, 01:04 AM IST

ಸಾರಾಂಶ

ಸಂಪೂರ್ಣ ಡಿಜೆ ಬೇಡ. ಕೇವಲ 2 ಬಾಕ್ಸ್‌ಗಳನ್ನು ಕೊಡಿ. ನಾವು ಅದನ್ನು ಬಳಸಿಕೊಂಡು ಗಣೇಶನ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಬೇಡಿಕೊಂಡರೂ ಪೊಲೀಸರು ಮಾತ್ರ ಅನುಮತಿ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಭೆ ಸೇರಿ ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡದಂತೆ ನಿರ್ಣಯ ಕೈಗೊಂಡಿದ್ದಾರೆ.

ಬ್ಯಾಡಗಿ: ಡಿಜೆ ಬಳಕೆಗೆ ಅನುಮತಿ ನೀಡುವ ವರೆಗೂ ತಾಲೂಕಿನ ಮೋಟೆಬೆನ್ನೂರಿನ ಹಿಂದೂ ಮಹಾಗಣಪತಿ ಸೇರಿದಂತೆ ಗ್ರಾಮದ ಯಾವುದೇ ಸಾರ್ವಜನಿಕ ಪ್ರತಿಷ್ಠಾಪಿಸಿದ ಗಣಪತಿಯನ್ನು ವಿಸರ್ಜಿಸದಿರಲು ಗ್ರಾಮಸ್ಥರು ನಿರ್ಧಾರಿಸಿದ್ದಾರೆ.

ಎಂದಿನಂತೆ ಭಾನುವಾರ 5ನೇ ದಿನಕ್ಕೆ ಗಣೇಶನ ವಿಸರ್ಜನೆ ಮಾಡಬೇಕಾಗಿತ್ತು. ಆದರೆ ಚಳಗೇರಿ ಟೋಲ್ ಬಳಿ ಡಿಜೆ ಸೌಂಡ್ ಸಿಸ್ಟಮ್ ಮೋಟೆಬೆನ್ನೂರು ಗ್ರಾಮಕ್ಕೆ ಬರದಂತೆ ಪೊಲೀಸರು ತಡೆದಿದ್ದಾರೆ. ಅಲ್ಲದೇ ಸೌಂಡ್ ಸಿಸ್ಟಮ್ ಮಾಲೀಕನನ್ನು ಮರಳಿ ಕಳುಹಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಸಂಪೂರ್ಣ ಡಿಜೆ ಬೇಡ. ಕೇವಲ 2 ಬಾಕ್ಸ್‌ಗಳನ್ನು ಕೊಡಿ. ನಾವು ಅದನ್ನು ಬಳಸಿಕೊಂಡು ಗಣೇಶನ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಬೇಡಿಕೊಂಡರೂ ಪೊಲೀಸರು ಮಾತ್ರ ಅನುಮತಿ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಭೆ ಸೇರಿ ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡದಂತೆ ನಿರ್ಣಯ ಕೈಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗಣಪತಿ ಹಿಂದೂ ಧರ್ಮದ ಪ್ರತೀಕ. ಆದರೆ ರಾಜ್ಯ ಸರ್ಕಾರ ಹಬ್ಬದಲ್ಲಿ ಡಿಜೆ ರದ್ದು ಮಾಡಿ ಹಿಂದೂ ಹಬ್ಬಗಳ ಮೇಲೆ ಸವಾರಿ ಮಾಡಲು ಹೊರಟಿದೆ. ಡಿಜೆ ಬಳಕೆಗೆ ಅವಕಾಶ ಕೊಡುವ ವರೆಗೆ ಮೋಟೆಬೆನ್ನೂರು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದೂ ಮಹಾಗಣಪತಿ ಸೇರಿದಂತೆ ಗ್ರಾಮದಲ್ಲಿನ ಯಾವುದೇ ಗಣಪತಿ ವಿಸರ್ಜನೆ ಮಾಡುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡ ಶಿವಬಸಪ್ಪ ಕುಳೆನೂರ ಮಾತನಾಡಿ, ರಾಜ್ಯದಲ್ಲಿ ಒಲೈಕೆ ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಹಿಂದೂ ವಿರೋಧಿಗಳ ಆಡಳಿತವು ಎಲ್ಲೆ ಮೀರಿದೆ. ವ್ಯವಸ್ಥಿತವಾಗಿ ಹಿಂದೂ ಧರ್ಮ ಹಾಗೂ ಹಿಂದೂ ಹಬ್ಬಗಳನ್ನು ಮುಗಿಸುವ ಹುನ್ನಾರ ಇದರಲ್ಲಿ ಅಡಗಿದೆ. ಇದಕ್ಕೆ ಗಣೇಶ ಹಬ್ಬದಲ್ಲಿ ಡಿಜೆ ರದ್ದು ಮಾಡಿರುವುದೇ ಸಾಕ್ಷಿ ಎಂದರು.

ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ಜಿಲ್ಲಾಧಿಕಾರಿಯವರು ಡಿಜೆ ನಿಷೇಧದ ಆದೇಶವನ್ನು ಮರುಪರಿಶೀಲಿಸಬೇಕು. ಅಲ್ಲದೇ ಕೇವಲ ಡಿಜೆ 2 ಬಾಕ್ಸ್‌ಗಳನ್ನು ಇಟ್ಟುಕೊಂಡು ಗಣೇಶ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡ ಎನ್.ಎಸ್. ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ದಿನದಿಂದಲೇ ಹಿಂದೂ ವಿರೋಧಿ ನಿಲುವು ಅನುಸರಿಸುತ್ತಿದೆ. ಹಿಂದೂ ಧರ್ಮ ನಾಶಕ್ಕೆ ಸಂಚು ನಡೆಸಲಾಗುತ್ತಿದ್ದು, ನಮ್ಮ ಆಚರಣೆಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ನಾವು ಡಿಜೆಗೆ ಅನುಮತಿ ನೀಡುವವರೆಗೂ ಯಾವುದೇ ಕಾರಣಕ್ಕೂ ಗಣೇಶನ ವಿಸರ್ಜನೆ ಮಾಡಲ್ಲ ಎಂದರು.

ಮುಖಂಡರಾದ ಶಿವಪುತ್ರಪ್ಪ ಅಗಡಿ, ಚಂದ್ರಶೇಖರ ಆನ್ವೇರಿ, ನಿಂಗಪ್ಪ ಅಂಗಡಿ, ನಾಗನಗೌಡ ಕಲ್ಲಾಪುರ, ನಿಂಗನಗೌಡ ಕಲ್ಲಾಪುರ, ಸೇರಿದಂತೆ ಹಿಂದೂ ಮಹಾಗಣಪತಿ ಜನತಾ ರಾಜ ಅಂಬೇಡ್ಕರ್‌ ಹಾಗೂ ಕರಿಬಸವೇಶ್ವರ ಗಣಪತಿ ಸಂಘದ ಅಧ್ಯಕ್ಷ ಸದಸ್ಯರು ಹಾಗೂ ಹಲವರು ಭಾಗವಹಿಸಿದ್ದರು.