ಸಾರಾಂಶ
ರಾಮನಗರ: ಶಾಲಾ ಕಾಲೇಜುಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಅದು ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಂಬಾಕು ನಿಷೇಧದ ನಾಮಫಲಕ ಬಿಡುಗಡೆ ಮಾತನಾಡಿದ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧವಾಗಿದ್ದು, ಸಾರ್ವಜನಿಕ ಸ್ಥಳದ ಮಾಲೀಕರು ಧೂಮಪಾನ ನಿಷೇಧ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು ಹಾಗೂ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ ಮತ್ತು ಪ್ರಾಯೋಜಕತೆಯನ್ನು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.ತಂಬಾಕು ಉತ್ಪನ್ನಗಳನ್ನು 18 ವಯಸ್ಸಿನೊಳಗಿನ ಮಕ್ಕಳಿಗೆ/ಅಪ್ರಾಪ್ತ ವಯಸ್ಸಿನವರು ಮಾರಾಟ ಮಾಡುವುದು ಹಾಗೂ ಅವರಿಂದ ಮಾರಾಟ ಮಾಡಿಸುವುದು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಅಂಗಡಿ ಮುಂಭಾಗ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಉಲ್ಲಂಘಿಸಿದ್ದಲ್ಲಿ 200 ರು.ಗಳವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
2024-25ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯು ತಂಬಾಕು ಸೇವನೆ ಕುರಿತು ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದ 5,466 ಜನರಿಗೆ ದಂಡ ವಿಧಿಸಿದೆ. ಇದೇ ರೀತಿ ಸಂಬಂಧಪಟ್ಟ ಇಲಾಖೆಗಳು ಕಾರ್ಯಾಚರಣೆ ನಡೆಸಿ ದಂಡ ವಿಧಿಸುವಂತೆ ಸೂಚಿಸಿದರು.ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳು ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಚಿತ್ರ ಸಹಿತ ಸಂದೇಶಗಳಿಲ್ಲದೇ ಮಾರಾಟ ಸರಬರಾಜು ಮಾಡುವುದು ನಿಷೇಧಿಸಲಾಗಿದೆ. ತಂಬಾಕು ಮಾರಾಟ ಮಾಡಲು ಪರವಾನಗಿ ಪಡೆಯಲು ಇಚ್ಛಿಸುವವರು ವ್ಯಾಪಾರ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯಬೇಕು ಹಾಗೂ ಇದು ಕಡ್ಡಾಯ ಎಂದರು.
ಜಿಲ್ಲೆಯಲ್ಲಿರುವ 1,606 ಶಾಲೆಗಳಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಲಾಗಿದೆ ಹಾಗೂ ಶಾಲಾ-ಕಾಲೇಜುಗಳ ಮುಂಭಾಗದಲ್ಲಿ ತಂಬಾಕು ಮುಕ್ತ ಶಾಲಾ/ಕಾಲೇಜು ಎಂಬ ನಾಮಫಲಕವನ್ನು ಕಡ್ಡಾಯವಾಗಿ ಪ್ರವೇಶ ದ್ವಾರದಲ್ಲಿ ಪ್ರದರ್ಶನ ಮಾಡಬೇಕೆಂದು ತಿಳಿಸಿದರು.ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ 21 ಗ್ರಾಮಗಳಲ್ಲಿ ತಂಬಾಕು ಮಾರಾಟ ನಿಷೇಧಿಸಲಾಗಿದ್ದು, ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಲಾಗಿದೆ. ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳು ಜಂಟಿಯಾಗಿ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಒಂದು ವೇಳೆ ತಂಬಾಕು ಮಾರಾಟ ಮಾಡುತ್ತಿದ್ದರೆ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಂಡು, ದಂಡ ವಿಧಿಸುವಂತೆ ಚಂದ್ರಯ್ಯ ಸೂಚಿಸಿದರು.
ತಂಬಾಕು ನಿಷೇಧ ಕುರಿತು ಸಾರ್ವಜನಿಕ ಸ್ಥಳಗಳ ಹಾಗೂ ಬಸ್ ನಿಲ್ದಾಣಗಳಲ್ಲಿ ಐಇಸಿ ಚಟುವಟಿಕೆಗಳು, ಬೀದಿ ನಾಟಕ, ವಿಚಾರ ಸಂಕೀರ್ಣಗಳನ್ನು ಏರ್ಪಡಿಸಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳು ಸೇರಿದಂತೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸುವಂತೆ ಹೇಳಿದರು.ಇದೇ ಸಂದರ್ಭದಲ್ಲಿ ತಂಬಾಕು ನಿಷೇಧ ಕುರಿತು ನಾಮಫಲಕಗಳನ್ನು ಅಪರ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಂಜುನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಿರಣ್ ಶಂಕರ್, ಮನೋ ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ಮಾಗಡಿ, ಕನಕಪುರ, ರಾಮನಗರ ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
5ಕೆಆರ್ ಎಂಎನ್ 1ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ತಂಬಾಕು ನಿಷೇಧ ಕುರಿತ ನಾಮಫಲಕ ಬಿಡುಗಡೆ ಮಾಡಿದರು.