ಸಾರಾಂಶ
ಶಿಕಾರಿಪುರ: ಆಗಸ್ಟ್ 15ರ ಸ್ವಾತಂತ್ರೋತ್ಸವದಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟ ಕೂಡಲೇ ನಿಷೇಧಿಸುವಂತೆ ಆಗ್ರಹಿಸಿ ಇಲ್ಲಿನ ಹಿಂದೂ ಜನಜಾಗೃತಿ ಸಮಿತಿಯಿಂದ ತಹಸೀಲ್ದಾರ್, ಡಿವೈಎಸ್‌ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ವೇಳೆ ಹಿಂದೂ ಪರ ಸಂಘಟನೆ ಮುಖಂಡ ಬಿ.ವಿ.ಮಂಜುನಾಥ್ ಬೇಗೂರು ಮಾತನಾಡಿ, ರಾಷ್ಟ್ರಧ್ವಜದ ಅಗೌರವ ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮುಂಬೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ವೇಳೆ ನ್ಯಾಯಾಲಯ ಪ್ಲಾಸ್ಟಿಕ್ ರಾಷ್ಟ್ರ ಧ್ವಜದಿಂದ ಆಗುವ ಅವಮಾನವನ್ನು ತಡೆಗಟ್ಟುವಂತೆ ಸರ್ಕಾರಕ್ಕೆ ಸ್ಪಷ್ಟ ಆದೇಶ ನೀಡಿದೆ. ಇದರೊಂದಿಗೆ ಕೇಂದ್ರ ಸರ್ಕಾರ, ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದರು.ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಧ್ವಜ ನಿಷೇಧಕ್ಕೆ ಮುಂದಾಗಿದ್ದು, ಈ ದಿಸೆಯಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದು ಲಾಂಛನಗಳು ಮತ್ತು ಹೆಸರುಗಳ ಅನುಚಿತ ಬಳಕೆ ತಡೆ ಕಾಯಿದೆ 1950 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ 1971ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.
ರಾಷ್ಟ್ರಧ್ವಕ್ಕೆ ಆಗುವ ಅಪಮಾನವನ್ನು ತಡೆಯಲು ಸಮಿತಿ ಕಳೆದ 21 ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಿದೆ. ದೇಶದ ಸ್ವಾತಂತ್ರ್ಯ ಸಮರದಲ್ಲಿ ಸಮಾವೇಶಗೊಂಡ ದೇಶ ಭಕ್ತರು ಆಂಗ್ಲರ ದೌರ್ಜನ್ಯದ ಸಂದರ್ಭದಲ್ಲಿ ಕೈಯಲ್ಲಿನ ರಾಷ್ಟ್ರಧ್ವಜ ಭೂಮಿಗೆ ಬೀಳಬಾರದು ಎಂದು ಲಾಟಿ ಹೊಡೆತದ ವಿಪರೀತ ನೋವು ಅನುಭವಿಸಿದ್ದಾರೆ. ರಾಷ್ಟ್ರಧ್ವಜದ ಅನಾದರವನ್ನು ತಡೆಗಟ್ಟಲು ಕ್ರಾಂತಿಕಾರಿಗಳು ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ. ಇಂತಹ ಶ್ರೇಷ್ಠ ಧ್ವಜ ಚಿಕ್ಕ ಮಕ್ಕಳ ಆಟಕ್ಕೆ, ವಾಹನಗಳಿಗೆ ಅಂಟಿಸುವ ಉದ್ದೇಶದಿಂದ ತೆಗೆದುಕೊಳ್ಳಲಾದ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜ ನಂತರದಲ್ಲಿ ರಸ್ತೆ, ಚರಂಡಿ, ಕಸದ ತೊಟ್ಟಿಗಳಲ್ಲಿ ಕಾಣುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. ಕಾಲಿನಿಂದ ತುಳಿಯಲ್ಪಡುತ್ತಿರುವ ರಾಷ್ಟ್ರಧ್ವಜದ ಅಗೌರವ ಬಲಿದಾನಗೈದ ಕ್ರಾಂತಿಕಾರಿಗಳಿಗೆ ಪರೋಕ್ಷ ಅಪಮಾನವಾಗಿದೆ ಎಂದು ವಿಷಾದಿಸಿದರು.ಕೆಲವರು ತ್ರಿವರ್ಣ ಬಣ್ಣದಿಂದ ಮುಖದ ಅಲಂಕಾರದ ಜತೆಗೆ ರಾಷ್ಟ್ರಧ್ವಜದ ಬಣ್ಣದ ಬಟ್ಟೆಗಳನ್ನು ಧರಿಸಿ ತಿರುಗಾಡುತ್ತಾರೆ. ಇದರಿಂದಲೂ ರಾಷ್ಟ್ರಧ್ವಜದ ಅವಮಾನವಾಗುತ್ತಿದೆ. ಹೀಗಾಗಿ ಹಿಂದೂ ಜನ ಜಾಗೃತಿ ಸಮಿತಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಪ್ರಶ್ನೋತ್ತರ ಸ್ಪರ್ಧೆಗಳನ್ನು ಆಯೋಜಿಸುವುದು ಕರ ಪತ್ರಗಳನ್ನು ವಿತರಿಸುವುದು, ಪೋಸ್ಟರ್ ಫ್ಲೆಕ್ಸ್‌ಗಳನ್ನು ಅಳವಡಿಸಿ ಸ್ಥಳೀಯ ಕೇಬಲ್ ಚಾನೆಲ್‌ಗಳಲ್ಲಿ ವಿಡಿಯೋ ಪ್ರದರ್ಶಿಸಿ ರಸ್ತೆಗಳಲ್ಲಿ ಬಿದ್ದ ರಾಷ್ಟ್ರ ಧ್ವಜ ಸಂಗ್ರಹಿಸುವುದು, ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರಧ್ವಜದ ಅಪಮಾನವನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮವನ್ನು ನಡೆಸಲು ಸೂಚನೆ ನೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ, ಈರೇಶ್, ಶ್ರೀ ಕಲ್ಪವೃಕ್ಷ ಸೇವಾ ಟ್ರಸ್ಟ್‌ನ ಅಧ್ಯಕ್ಷ ವಿ.ರಘು, ಮಾಲತೇಶ್, ಬಸವನ ಗೌಡ್ರು ನಂದಿಹಳ್ಳಿ ಮತ್ತಿತರರಿದ್ದರು.