ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಲಿಂಗಾಯತ ಒಳಪಂಗಡಗಳಲ್ಲಿ ಬಣಜಿಗ ಸಮುದಾಯಕ್ಕೆ ವಿಶಿಷ್ಟ ಸ್ಥಾನವಿದೆ. ವೀರಶೈವ ಪರಂಪರೆಯ ರಕ್ಷಣೆಗೆ ಮತ್ತು ಪ್ರಗತಿಗೆ ಬಣಜಿಗರ ಕೊಡುಗೆ ಅನನ್ಯವಾದುದು ಎಂದು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ಹೇಳಿದರು.ಭಾನುವಾರ ಬನಹಟ್ಟಿಯ ಬಿದರಿ (ಬಸವೇಶ್ವರ) ಸಮುದಾಯ ಭವನದಲ್ಲಿ ನಡೆದ ರಬಕವಿ-ಬನಹಟ್ಟಿ ತಾಲೂಕು ಬಣಜಿಗ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಮಾಜವನ್ನು ಗುರಿಯಾಗಿಟ್ಟುಕೊಂಡು ವಿನಾಕಾರಣ ಟೀಕೆ, ಅವಹೇಳನ ಮಾಡುವ ಹೀನ ಪರಂಪರೆ ಶುರುವಾಗಿದೆ. ರಾಜ್ಯಕ್ಕೆ ೯ ಮುಖ್ಯಮಂತ್ರಿಗಳನ್ನು ನೀಡಿದ ಹೆಮ್ಮೆ ನಮಗಿದೆ. ನಾವು ಬೆಂಕಿ ಹಚ್ಚುವವರಲ್ಲ, ಬದಲಾಗಿ ನಂದಿಸಿ ಕಾಯಕ, ನೆಮ್ಮದಿ, ಸಹಬಾಳ್ವೆಯ ಮತ್ತು ಇತರೆ ಸಮುದಾಯದೊಡನೆ ಸಾಮರಸ್ಯದಿಂದ ಬದುಕುವವರು. ನಮ್ಮ ಹೆಮ್ಮೆಯ ಪರಂಪರೆ, ಸಂಸ್ಕೃತಿ ನಾಶವಾಗಲು ಬಿಡದೇ ಮುಂದಿನ ಪೀಳಿಗೆಗೂ ಅದನ್ನು ಮುಂದುವರಿಸುವತ್ತ ತಾಯಂದಿರು ಮಕ್ಕಳಿಗೆ ತಿಳಿಸಿಕೊಡಬೇಕು. ನಿಷ್ಠೆ, ಪ್ರಾಮಾಣಿಕತೆ ಬಣಜಿಗರ ರಕ್ತಗುಣವಾಗಿದ್ದು, ಇತರೆ ಸಮುದಾಯಗಳ ಪ್ರಗತಿಗೂ ಉದಾರ ನೆರವು ನೀಡುವ ಉದಾರ ಭಾವನೆಯ ಸಮುದಾಯಕ್ಕೆ ಅವಹೇಳನ ಮಾಡುವ ಕೆಲಸ ವಿಷ ಬುದ್ದಿಯ ಪುಢಾರಿಗಳು ಕೈಬಿಡಬೇಕು ಎಂದರು.
ಗದಗ ನ್ಯಾಯಾಧೀಶ ಜಿ.ಆರ್. ಶೆಟ್ಟರ ಮಾತನಾಡಿ, ಬಣಜಿಗರು ಸಮುದಾಯದ ಜೊತೆಗೆ ಉಳಿದ ಸಮುದಾಯಗಳನ್ನು ಸರಿದೂಗಿಸಿಕೊಂಡು ಸಾಗುವ ಮನೋಧರ್ಮದವರು. ನಮ್ಮ ಧಾರ್ಮಿಕ ಆಚರಣೆಗಳು, ನೇಮ-ನಿಷ್ಠೆ, ಸಂಸ್ಕಾರ ಮತ್ತು ಪರಂಪರೆಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆಗಾರಿಕೆಯನ್ನು ಇಂದಿನ ಪಾಲಕರು ನಿಭಾಯಿಸಿ ನಮ್ಮ ಧರ್ಮ ಉಳಿಸಬೇಕೆಂದರು.ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಗ್ರಗಾಮಿಗಳೊಡನೆ ಸೆಣಸುವಾಗ ಹೊಟ್ಟೆಗೆ ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದರೂ ಉಗ್ರರ ಬಲಿ ಹಾಕಿದ ವೀರಯೋಧ ಹಿಪ್ಪರಗಿ ಗ್ರಾಮದ ಅಂದಾನೆಪ್ಪ ಕನಶೆಟ್ಟಿ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ ನಾಶಿ, ಅಧ್ಯಕ್ಷ ಈಶ್ವರ ಬಿದರಿ, ಚಂದ್ರಶೇಖರ ಹುಲಗಬಾಳಿ, ಬಶೆಟ್ಟೆಪ್ಪ ಕುಂಚನೂರ, ಮಹಾಲಿಂಗಪ್ಪ ಕುಳ್ಳೊಳ್ಳಿ, ಕಲ್ಲಪ್ಪ ತಂಬಾಕು, ಸೋಮಶೇಖರ ಕೊಟ್ರಶೆಟ್ಟಿ, ಶಿವಪ್ಪ ಬಾಗಲಕೋಟ, ಶ್ರೀಶೈಲ ಪಟ್ಟಣಶೆಟ್ಟಿ, ಅಶೋಕ ಕಲ್ಪಡಿ, ಪ್ರಕಾಶ ಟೆಂಗಿನಕಾಯಿ, ಗಜಾನನ ತೆಗ್ಗಿ, ಮಹಾಶಾಂತ ಶೆಟ್ಟಿ, ನೀಲಕಂಠ ಮುತ್ತೂರ, ಹೊಳಬಸಪ್ಪ ಜಂಬಗಿ, ಜಯವಂತ ಗುಳ್ಳ, ಶಂಕರ ಬಟಕುರ್ಕಿ, ಪ್ರವೀಣ ಅವರಾದಿ, ಉಮೇಶ ಹನಗಂಡಿ, ಸಾತಪ್ಪ ಕನಶೆಟ್ಟಿ, ಗಂಗಪ್ಪ ಗೊಬ್ಬಾಣಿ, ಬಸವರಾಜ ಚಟ್ನಿ, ಚನಬಸಪ್ಪ ಹೊಸೂರ, ರಾಜೇಶ್ವರಿ ಬಂದಿ, ಕಲಾವತಿ ಪಟ್ಟಣಶೆಟ್ಟಿ, ಶಿಲ್ಪಾ ಮುತ್ತೂರ, ತಾಲೂಕಿನ ವಿವಿಧ ಪ್ರದೇಶಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಗಡೆಣ್ಣವರ ಪ್ರಾರ್ಥಿಸಿದರು. ವಿಜಯಕುಮಾರ ಹಲಕುರ್ಕಿ ಸ್ವಾಗತಿಸಿದರು. ರವೀಂದ್ರ ಅಷ್ಟಗಿ, ಶ್ರೀದೇವಿ ಬಿದರಿ ನಿರೂಪಿಸಿದರು.