ತಾಲೂಕಿನ ಅಂಚೇಚೋಮನಹಳ್ಳಿ ಸರ್ವೆ ನಂ- 33ರಲ್ಲಿ ಚಂದ್ರಪ್ಪ ಅವರ ಸ್ವಂತವಾದ 2.30 ಗುಂಟೆ ಜಮೀನಿನಲ್ಲಿ ಇದೇ ಮೊದಲ ಭಾರಿಗೆ ಕಳೆದ ಮೇ ತಿಂಗಳಲ್ಲಿ 1500 ಬಾಳೆ ಸಸಿ ನೆಟ್ಟು ಆರೈಕೆ ಮಾಡಿದ್ದು, ಮುಂದಿನ ತಿಂಗಳು ಫಸಲು ಕೈ ಸೇರಬೇಕಿತ್ತು. ಅದರೆ ಕಿಡಿಗೇಡಿಗಳು ಸೋಮವಾರ ರಾತ್ರಿ ಬಾಳೆ ತೋಟದ 1500 ಫಲ ಬಿಡುವ ಬಾಳೆಗಿಡಗಳನ್ನು ಸಂಪೂರ್ಣ ಕತ್ತರಿಸಿ ಹಾಕಿ ಹೋಗಿದ್ದು ರೈತ ಚಂದ್ರಪ್ಪ ತೋಟದ ದೃಶ್ಯ ಕಂಡು ಕಂಗಾಲಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕಡೂರು
ತಾಲೂಕಿನ ಡಿ.ಕಾರೇಹಳ್ಳಿ (ದೇವರ ಕಾರೇಹಳ್ಳಿ) ಗ್ರಾಮದ ವ್ಯವಸಾಯ ಕಾಲೋನಿಯ ರೈತ ಚಂದ್ರಪ್ಪ ಎಂಬುವರು ಬೆಳೆದಿರುವ ಬಾಳೆ ತೋಟವನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಸಂಪೂರ್ಣ ನಾಶ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಅಂಚೇಚೋಮನಹಳ್ಳಿ ಸರ್ವೆ ನಂ- 33ರಲ್ಲಿ ಚಂದ್ರಪ್ಪ ಅವರ ಸ್ವಂತವಾದ 2.30 ಗುಂಟೆ ಜಮೀನಿನಲ್ಲಿ ಇದೇ ಮೊದಲ ಭಾರಿಗೆ ಕಳೆದ ಮೇ ತಿಂಗಳಲ್ಲಿ 1500 ಬಾಳೆ ಸಸಿ ನೆಟ್ಟು ಆರೈಕೆ ಮಾಡಿದ್ದು, ಮುಂದಿನ ತಿಂಗಳು ಫಸಲು ಕೈ ಸೇರಬೇಕಿತ್ತು. ಅದರೆ ಕಿಡಿಗೇಡಿಗಳು ಸೋಮವಾರ ರಾತ್ರಿ ಬಾಳೆ ತೋಟದ 1500 ಫಲ ಬಿಡುವ ಬಾಳೆಗಿಡಗಳನ್ನು ಸಂಪೂರ್ಣ ಕತ್ತರಿಸಿ ಹಾಕಿ ಹೋಗಿದ್ದು ರೈತ ಚಂದ್ರಪ್ಪ ತೋಟದ ದೃಶ್ಯ ಕಂಡು ಕಂಗಾಲಾಗಿದ್ದಾರೆ.ಸೋಮವಾರ ಸಂಜೆ 6 ಗಂಟೆಯ ತನಕ ಬಾಳೆ ತೋಟದಲ್ಲಿಯೇ ಇದ್ದು ನಂತರ ಮನೆಗೆ ಬಂದಿದ್ದೆ. ಮಂಗಳವಾರ ಬೆಳಿಗ್ಗೆ ನನ್ನ ಮಗನ ಸ್ನೇಹಿತ ರಂಗಸ್ವಾಮಿ ಎಂಬುವರು ಮಗನಿಗೆ ಪೋನ್ ಮಾಡಿ ನಿಮ್ಮ ಜಮೀನಿನಲ್ಲಿ ಬಾಳೆಗೊನೆಗಳು ಮತ್ತು ಗಿಡಗಳನ್ನು ಯಾರೋ ಕಡಿದು ಹಾಕಿದ್ದಾರೆ ಎಂದು ಮಾಹಿತಿ ನೀಡಿದಾಕ್ಷಣ ತೋಟಕ್ಕೆ ಹೋಗಿ ನೋಡಿದರೆ ತೋಟದ ಬಾಳೆ ಸಂಪೂರ್ಣ ನಾಶ ಮಾಡಿರುವುದು ಕಂಡು ನಂತರ ಕಡೂರು ಠಾಣೆಗೆ ದೂರು ನೀಡಿರುವುದಾಗಿ ರೈತ ಚಂದ್ರಪ್ಪ ಮಾಹಿತಿ ನೀಡಿದರು.
ತೋಟದಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಬಾಳೆ ಹಾಕಲು 5 ಲಕ್ಷ ರು. ಕೈ ಸಾಲ ಮಾಡಿದ್ದು ತಿಂಗಳ ನಂತರ ಕನಿಷ್ಟ 20 ಲಕ್ಷ ರೂ ಬಾಳೆಯಿಂದ ಹಣ ಬರುವ ನಿರೀಕ್ಷೆ ಇತ್ತು. ಅದರೆ ಕಿಡಿಗೇಡಿಗಳ ಕುತಂತ್ರದಿಂದ ನಮ್ಮ ಜೀವನ ಹಾಳಾಯಿತು ಎಂದು ಕಣ್ಣಿರಿಟ್ಟಿದ್ದಾರೆ.ಈ ದುಷ್ಕೃತ್ಯ ಕುರಿತು ಗ್ರಾಮದ ಕೆಲವರ ಮೇಲೆ ಗುಮಾನಿ ಇದೆ. ಕಡೂರು ಪೊಲೀಸರು ಸಂಭಂಧಿಸಿದ ಅಧಿಕಾರಿಗಳು ಕಿಡಿಗೇಡಿಗಳನ್ನು ಹುಡುಕಿ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ದೂರು ನೀಡಿದ್ದಾರೆ.
ಕಡೂರು ಪಿಎಸ್‌ಐ ಸರ್ಜಿತ್‌ಕುಮಾರ್ ಘಟನೆ ನಡೆದಿರುವ ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಚಿಕ್ಕಮಗಳೂರಿನಿಂದ ಶ್ವಾನ ದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದು, ಯಾವುದೇ ಸುಳಿವು ದೊರಕಿಲ್ಲ. ರೈತ ಚಂದ್ರಪ್ಪ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು ತನಿಖೆ ನಡೆಯುತ್ತಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು.