ವಿದ್ಯಾರ್ಥಿಗಳ ಬಿಸಿಯೂಟದ ತಟ್ಟೆಗೆ ಬಾಳೆಹಣ್ಣು ಪೂರೈಕೆ ತಲೆಬಿಸಿ

| Published : Aug 31 2025, 02:00 AM IST

ಸಾರಾಂಶ

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಿದ್ಯಾರ್ಥಿಗಳಿಗೆ ಪೋಷಕಾಂಶಗಳನ್ನು ಪೂರೈಸಲು ಸರ್ಕಾರ 2022ರಲ್ಲಿ ಬೇಯಿಸಿದ ಮೊಟ್ಟೆ ವಿತರಿಸಲು ಆರಂಭಿಸಿತು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ 2 ಬಾಳೆಹಣ್ಣು ವಿತರಿಸಲಾಗುತ್ತದೆ. ಆದರೆ ಶ್ರಾವಣದಲ್ಲಿ ವಿದ್ಯಾರ್ಥಿಗಳು ಮೊಟ್ಟೆ ಸೇವನೆ ನಿಲ್ಲಿಸಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಶ್ರಾವಣಮಾಸ ಹಾಗೂ ಸದ್ಯ ಬರುತ್ತಿರುವ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಾಳೆಹಣ್ಣಿನ ದರ ಹೆಚ್ಚಳವಾಗಿದ್ದು, ಶ್ರಾವಣ ಪರ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ತತ್ತಿ (ಮೊಟ್ಟೆ) ಸೇವನೆ ನಿಲ್ಲಿಸಿದ ಹಿನ್ನೆಲೆಯಲ್ಲಿ ಬಾಳೆ ಹಣ್ಣು ಪೂರೈಸಲು ಹೊಣೆಹೊತ್ತ ಮುಖ್ಯೋಪಾಧ್ಯಾಯರಿಗೆ ವೆಚ್ಚದಾಯಕವಾಗಿದೆ.

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಿದ್ಯಾರ್ಥಿಗಳಿಗೆ ಪೋಷಕಾಂಶಗಳನ್ನು ಪೂರೈಸಲು ಸರ್ಕಾರ 2022ರಲ್ಲಿ ಬೇಯಿಸಿದ ಮೊಟ್ಟೆ ವಿತರಿಸಲು ಆರಂಭಿಸಿತು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ 2 ಬಾಳೆಹಣ್ಣು ವಿತರಿಸಲಾಗುತ್ತದೆ. ಆದರೆ ಶ್ರಾವಣದಲ್ಲಿ ವಿದ್ಯಾರ್ಥಿಗಳು ಮೊಟ್ಟೆ ಸೇವನೆ ನಿಲ್ಲಿಸಿದ್ದಾರೆ. ಶಾಲೆಗಳಲ್ಲಿ ಬೆಳಗ್ಗೆ ಹಾಜರಿ ಹಾಕುವ ಕಾಲಕ್ಕೆ ವಿದ್ಯಾರ್ಥಿಗಳಿಂದ ಮೊಟ್ಟೆ, ಬಾಳೆಹಣ್ಣು ತಿನ್ನುವವರ ಅಂಕಿ ಸಂಖ್ಯೆ ಪಡೆದು ಅಕ್ಷರ ದಾಸೋಹ ಪುಸ್ತಕದಲ್ಲಿ ದಾಖಲಿಸುತ್ತಾರೆ.

ಶ್ರಾವಣದ ಅವಧಿಯಲ್ಲಿ ಬಾಳೆಹಣ್ಣು ತಿನ್ನುವವರ ಸಂಖ್ಯೆಯೇ ಹೆಚ್ಚಾಗಿರುವುದು ಕಂಡು ಬಂದಿದೆ. ಬೇಯಿಸಿದ ಮೊಟ್ಟೆ ಸೇರಿದಂತೆ 2 ಬಾಳೆಹಣ್ಣಿಗೆ ಸರ್ಕಾರದಿಂದ ₹6 ಖರ್ಚು ನಿಗದಿಪಡಿಸಲಾಗಿದೆ. ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮುಖ್ಯೋಪಾಧ್ಯಾಯರ ಖಾತೆಗೆ ಹಣ ಬರುತ್ತಿದ್ದು, ಶ್ರಾವಣದ ಸಂದರ್ಭದಲ್ಲಿ ಬಾಳೆಹಣ್ಣಿನ ದರ ಏರಿದ ಹಿನ್ನೆಲೆಯಲ್ಲಿ ನಿಗದಿತ ಹಣ ಮೀರಿ ಖರ್ಚು ಬಂದಿದೆ.

ದಿ. ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ 1999ರಿಂದ 2004ರ ಅವಧಿಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಆರಂಭಿಸಲಾಯಿತು. ಆರಂಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದ ಊಟವನ್ನು ಹೈಸ್ಕೂಲ್‌ವರೆಗೆ ವಿಸ್ತರಿಸಲಾಯಿತು. ಬಳಿಕ ಅನುದಾನಿತ ಶಾಲೆಗಳಿಗೆ ನೀಡಲು ಆರಂಭವಾಗಿದೆ. ನಂತರ ಬೇಯಿಸಿದ ಮೊಟ್ಟೆ ಇಲ್ಲವೇ ಬಾಳೆಹಣ್ಣು ವಿತರಣೆಯಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಸದ್ಯ 1070 ಶಾಲೆಗಳಿಗೆ ನಿತ್ಯ ಬಿಸಿಯೂಟ ಪೂರೈಕೆಯಾಗುತ್ತಿದೆ. ನವಲಗುಂದ ಪೂರ್ಣ ತಾಲೂಕು, ಹುಬ್ಬಳ್ಳಿ ನಗರ ಅರ್ಧ ಹಾಗೂ ಧಾರವಾಡ ನಗರ ಅರ್ಧ ಭಾಗದ ಶಾಲೆಗಳಿಗೆ ಅದ್ಯಮ ಚೇತನ ಫೌಂಡೇಶನಿಂದ ಬಿಸಿಯೂಟ ಪೂರೈಕೆಯಾಗುತ್ತಿದೆ. ಉಳಿದಂತೆ ಅಣ್ಣಿಗೇರಿ, ಕುಂದಗೋಳ, ಕಲಘಟಗಿ, ಧಾರವಾಡ ತಾಲೂಕು, ಹುಬ್ಬಳ್ಳಿ ತಾಲೂಕುಗಳಿಗೆ ಇಸ್ಕಾನ್‌ದಿಂದ ಬಿಸಿಯೂಟ ಪೂರೈಕೆಯಾಗುತ್ತಿದೆ.

ಸೋಮವಾರ, ಬುಧವಾರ, ಶುಕ್ರವಾರ-ಅನ್ನ ಸಾಂಬಾರ್‌, ಮಂಗಳವಾರ, ಗುರುವಾರ ಫಲಾವು-ಸಾರು, ಶನಿವಾರ-ಉಪ್ಪಿಟ್ಟು, ಸಜ್ಜಕಾ, ಬಿಸಿಬೇಳೆ ಬಾತ್‌ ನೀಡುತ್ತಾರೆ. ಇದರ ಜತೆ ಜತೆಗೆ ತತ್ತಿ-ಬಾಳೆ ಹಣ್ಣು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ತೂಕ ಸಹ ಹೆಚ್ಚಾಗಿದ್ದು, ಆರೋಗ್ಯ ಸುಧಾರಿಸಿದೆ ಎನ್ನುತ್ತಾರೆ ನಿರ್ವಹಣೆ ಹೊತ್ತ ಮುಖ್ಯೋಪಾಧ್ಯಾಯರು.

ದಿನಾ ಶಾಲೆಗೆ ಬಂದ ಮೇಲೆ ತತ್ತಿ-ಬಾಳೆಹಣ್ಣು ತಿನ್ನುವವರ ಲೆಕ್ಕಾ ಮಾಡುವುದೇ ಕೆಲಸವಾಗಿದೆ. ಆಡಳಿತ ಬಿಟ್ಟು ಇದನ್‌ ಮಾಡೂದು ಆಗೈತಿ. ಬಿಸಿಯೂಟ ವಿತರಣೆ ಎನ್‌ಜಿಓಗಳಿಗೆ ನೀಡಿರುವಂತೆ ಮೊಟ್ಟೆ, ಬಾಳೆಹಣ್ಣು ವಿತರಣೆ ಸಹ ಎನ್‌ಜಿಓಗಳಿಗೆ ನೀಡಬೇಕು ಎಂದು ಮುಖ್ಯೋಪಾಧ್ಯಾಯರೇ ರಚಿಸಿಕೊಂಡ ಸಂಘ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸುತ್ತ ಬಂದಿದ್ದೇವೆ ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಂಘದವರು.

ನಾನು 5 ಶಾಲೆಗೆ ನಿತ್ಯ 700ರಿಂದ 800 ಹಣ್ಣು ಕೊಡುತ್ತೇನೆ. ಶ್ರಾವಣದಲ್ಲಿ ಬಾಳೆ ಹಣ್ಣು ದರ ಕ್ವಿಂಟಲ್‌ ₹2200 ರಿಂದ ₹2300 ಗೆ ಏರಿದೆ. ಉಳಿದ ದಿನಗಳಲ್ಲಿ ಕ್ವಿಂಟಲ್‌ಗೆ ₹1600 ರಿಂದ ₹1800 ಇರುತ್ತದೆ. ಹೀಗಾಗಿ ಅವರ ಬಜೆಟ್‌ನಲ್ಲಿ ಸಣ್ಣ ಹಣ್ಣುಗಳನ್ನು ನೀಡಿದ್ದೇನೆ ಎಂದು ಬಾಳೆ ಹಣ್ಣಿನ ವ್ಯಾಪಾರಸ್ಥ ಸುನೀಲ್‌ ಬಿಲಾನಾ ಹೇಳಿದರು.ಮೊಟ್ಟೆ ಯೋಜನೆಯನ್ನು ಎನ್‌ಜಿಓಗಳಿಗೆ ನೀಡುವಂತೆ ಬೇಡಿಕೆ ಇದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಬಿಸಿಯೂಟ ವಿತರಿಸುವ ಇಸ್ಕಾನ್‌ ಹಾಗೂ ಅದ್ಯಮ ಚೇತನ ಫೌಂಡೇಶನ್‌ಗಳು ಮೊಟ್ಟೆ ವಿತರಿಸಲು ಸಾರಾಸಗಟಾಗಿ ನಿರಾಕರಿಸಿವೆ. ಹೀಗಾಗಿ ಮುಖ್ಯೋಪಾಧ್ಯಾಯರೇ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಪಿ.ಎಂ. ಪೋಷಣ್‌ ಶಕ್ತಿ ನಿರ್ಮಾಣ (ಅಕ್ಷರ ದಾಸೋಹ ಯೋಜನೆ) ಶಿಕ್ಷಣಾಧಿಕಾರಿ ರೂಪಾ ಪುರಮ್ಮಕರ ಹೇಳಿದರು.