ಸಾರಾಂಶ
ಭಕ್ತರು ಬಾಳೆಹಣ್ಣು ಕೊಂಡೊಯ್ಯಲು ನಿರ್ಬಂಧ ವಿಧಿಸಲಾಗಿದೆ.
ಹೊಸಪೇಟೆ: ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಆನೆಯಾದ ಲಕ್ಷ್ಮಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ದೇಗುಲದಲ್ಲಿ ಭಕ್ತರು ಬಾಳೆಹಣ್ಣು ಕೊಂಡೊಯ್ಯಲು ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ನಿಷೇಧಿಸಿದೆ.
ಹಂಪಿಗೆ ಆಗಮಿಸುವ ದೇಶ, ವಿದೇಶಿ ಪ್ರವಾಸಿಗರು ದೇಗುಲದ ಆನೆಗೆ ಪ್ರೀತಿಯಿಂದ ಬಾಳೆಹಣ್ಣು ತಿನ್ನಿಸುವುದು ವಾಡಿಕೆಯಾಗಿದೆ. ಆದರೆ, ಬಾಳೆಹಣ್ಣಿಗೆ ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದು ಆನೆಯನ್ನು ಪರೀಕ್ಷಿಸಿದ ಪಶುವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.ಹಾಗಾಗಿ ಆನೆಯ ಆರೋಗ್ಯ ಹಿತದೃಷ್ಟಿಯಿಂದ ಈಗ ದೇವಾಲಯದಲ್ಲಿ ಕಾಯಿ ಮಾತ್ರ ಒಳ ಬಿಡಲಾಗುತ್ತಿದೆ. ಬಾಳೆಹಣ್ಣು ಬಾಗಿಲಲ್ಲೇ ಪಡೆಯಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಕೂಡ ಒಳ ಬಿಡಲಾಗುತ್ತಿಲ್ಲ.
ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಈ ನಡುವೆ ದೇವಾಲಯದ ಆನೆಗೆ ಬಾಳೆಹಣ್ಣು ತಿನ್ನಿಸುವುದು ಕೂಡ ಟ್ರೆಂಡ್ ಆಗಿ ಪರಿಣಮಿಸಿದೆ. ಈ ಆನೆಗೆ ಪ್ರವಾಸಿಗರು ಬಾಳೆಹಣ್ಣು ನೀಡಿ ಫೋಟೊ ಕ್ಲಿಕ್ಕಿಸಿಕೊಳ್ಳುವುದು ಕೂಡ ಒಂದು ಫ್ಯಾಶನ್ ಆಗಿತ್ತು. ಈಗ ಇದಕ್ಕೆ ಕಡಿವಾಣ ಬಿದ್ದಿದ್ದು, ಧಾರ್ಮಿಕ ದತ್ತಿ ಇಲಾಖೆ ಉತ್ತಮ ನಡೆ ಅನುಸರಿಸಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಪ್ರವಾಸಿ ಮಾಗದರ್ಶಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಬಾಳೆಹಣ್ಣು ಪಡೆಯುತ್ತಿರುವ ದೇಗುಲದ ಸಿಬ್ಬಂದಿ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಬಾಳೆಹಣ್ಣು, ಪ್ಲಾಸ್ಟಿಕ್ ಚೀಲಗಳನ್ನು ಪಡೆದು ಬುಟ್ಟಿಯೊಂದರಲ್ಲಿ ಹಾಕಲಾಗುತ್ತಿದೆ.