ಸಾರಾಂಶ
ಕಾರವಾರ: ಇಲ್ಲಿನ ಕೂರ್ಮಗಡ ದ್ವೀಪದಲ್ಲಿ ಸೋಮವಾರ ನರಸಿಂಹ ದೇವರ ಜಾತ್ರಾ ಮಹೋತ್ಸವ ಶ್ರದ್ಧಾ- ಭಕ್ತಿಯಿಂದ ನಡೆಯಿತು. ಸಾವಿರಾರು ಭಕ್ತರು ಶ್ರೀದೇವರ ದರ್ಶನ ಪಡೆದರು. ತಲೆತಲಾಂತರದಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ನರಸಿಂಹ ದೇವರ ಉತ್ಸವ ಮೂರ್ತಿಯನ್ನು ಸೋಮವಾರ ನಗರದ ಕಡವಾಡದಿಂದ ದೋಣಿಯ ಮೂಲಕ ಕೂರ್ಮಗಡ ದ್ವೀಪಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಗುಡಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬೆಳಗ್ಗೆ ಉತ್ಸವ ಮೂರ್ತಿಯನ್ನು ದೋಣಿಯ ಮೂಲಕ ವಾಪಸ್ ಕಡವಾಡದಲ್ಲಿ ಇರುವ ದೇವರ ಮೂಲಸ್ಥಾನಕ್ಕೆ ತರಲಾಗುತ್ತದೆ.ಕೂರ್ಮಗಡ ಅರಬ್ಬಿ ಸಮುದ್ರದಿಂದ ಆವೃತವಾಗಿದ್ದು, ದ್ವೀಪದಲ್ಲಿ ನಡೆಯುವ ಈ ಜಾತ್ರೆಗೆ ಭಕ್ತರಿಗೆ ತೆರಳಲು ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಬೋಟ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ನರಸಿಂಹ ದೇವರಿಗೆ ಬಾಳೆಗೊನೆ ಅರ್ಪಿಸುವುದು ಮುಖ್ಯ ಹರಕೆಯಾಗಿದೆ. ಇದರೊಂದಿಗೆ ಹೂವು, ಹಣ್ಣುಕಾಯಿ ಇತ್ಯಾದಿ ಹರಕೆಯನ್ನೂ ತೀರಿಸಲಾಗುತ್ತದೆ.
ಭದ್ರತೆ: ೨೦೧೯ರ ಜನವರಿಯಲ್ಲಿ ಇದೇ ಜಾತ್ರೆಗೆ ತೆರಳಿದ್ದ ಭಕ್ತರು ದ್ವೀಪದಿಂದ ವಾಪಸ್ ಆಗಮಿಸುವಾಗ ದೋಣಿ ಮುಳುಗಿ ೧೬ ಭಕ್ತರು ಮೃತಪಟ್ಟಿದ್ದರು. ಹೀಗಾಗಿ ಸಾಕಷ್ಟು ಎಚ್ಚರಿಕಾ ಕ್ರಮಗಳನ್ನು ಪೊಲೀಸ್, ಕಂದಾಯ, ಮೀನುಗಾರಿಕಾ ಇಲಾಖೆ ತೆಗೆದುಕೊಳ್ಳುತ್ತಿದೆ. ಈ ಬಾರಿ ಕೂಡಾ ಬೈತಖೋಲ್ ಹಾಗೂ ಕೂರ್ಮಗಡ ದ್ವೀಪದ ಜಟ್ಟಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.ಜಿಲ್ಲೆಯಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಒಳಗೊಂಡು ಬೇರೆ ಬೇರೆ ಭಾಗದಿಂದ ಸಾವಿರಾರು ಜನರು ಆಗಮಿಸಿ ಸರದಿಯಲ್ಲಿ ನಿಂತು ಶ್ರೀದೇವರ ದರ್ಶನ ಪಡೆದರು.
ಮೀನುಗಾರರ ನಂಬಿಕೆ: ಮೀನುಗಾರ ಸಮುದಾಯರವರು ನರಸಿಂಹ ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಮೀನುಗಾರಿಕೆಗೆ ತೆರಳಿದ ವೇಳೆ ತಮ್ಮನ್ನು ಶ್ರೀದೇವರು ಕಾಪಾಡುತ್ತಾನೆ ಎನ್ನುವ ನಂಬಿಕೆಯೇ ಮೀನುಗಾರ ಸಮುದಾಯದಲ್ಲಿದೆ.ಜಾತ್ರೆಗೆ ತೆರಳುವ ಬೋಟ್‌ಗಳನ್ನು ಸ್ವಚ್ಛವಾಗಿ ತೊಳೆದು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಇದೇ ಬೋಟ್‌ಗಳಲ್ಲಿ ಜಾತ್ರೆಗೆ ತೆರಳುವ ಭಕ್ತರನ್ನು ಉಚಿತವಾಗಿ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬರಲಾಯಿತು.ಧನ್ವಂತರಿ ವಿಷ್ಣು, ವಿಘ್ನೇಶ್ವರ ದೇವರ ವರ್ಧಂತ್ಯುತ್ಸವ ಸಂಪನ್ನ
ಭಟ್ಕಳ: ಅನಾದಿ ಕಾಲದಿಂದಲೂ ಪ್ರಸಿದ್ಧಿಯಾಗಿರುವ ಹಾಗೂ ಸರ್ವರೋಗ ನಿವಾರಕ ಮಹಿಮೆ ಹೊಂದಿರುವ ತಾಲೂಕಿನ ಮಾರುಕೇರಿಯ ಹೂತ್ಕಳದ ಧನ್ವಂತರಿ ವಿಷ್ಣುಮೂರ್ತಿ, ವಿಘ್ನೇಶ್ವರ ದೇವಸ್ಥಾನದಲ್ಲಿ ಸೋಮವಾರ ಮಹಾಧನ್ವಂತರಿ ಹವನ, ಧನ್ವಂತರಿ ವ್ರತಕಥೆ, ಅಷ್ಟದೃವ್ಯ ಗಣಹವನ ಹಾಗೂ ದೇವರ ವರ್ಧಂತ್ಯುತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.ವೇ.ಮೂ. ಕಟ್ಟೆ ತಿಮ್ಮಣ್ಣ ಭಟ್ಟರ ಪ್ರಧಾನ ಆಚಾರ್ಯತ್ವದಲ್ಲಿ ಸೋಮವಾರ ಬೆಳಗ್ಗೆ ಮಹಾಪ್ರಾರ್ಥನೆ ಶುದ್ಧೀಕರ್ಮ, ಪುಣ್ಯಾವಾಚನ, ಪ್ರಧಾನ ಸಂಕಲ್ಪ, ಋತ್ವಿಗ್ವರ್ಣನ, ಮಧುರ್ಕಪೂಜೆ, ನಾಂದಿ, ಮಾತೃಕಾಪೂಜೆ, ಕೌತುಕಬಂಧನ, ಸಹಸ್ರ ತುಳಸಿ ಅರ್ಚನೆ ಮುಂತಾದ ಧಾರ್ಮಿಕ ಕಾರ್ಯಗಳು ಜರುಗಿತು.ಮಧ್ಯಾಹ್ನ ನೂರಾರು ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ 5 ಗಂಟೆಗೆ ಡಾ. ವಾದಿರಾಜ ಭಟ್ ಅವರನ್ನು ಗೌರವಿಸಲಾಯಿತು. ಸಂಜೆ ಉದಯ ಪ್ರಭು ಬಳಗದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಗಮನ ಸೆಳೆಯಿತು. ರಾತ್ರಿ ರಂಗಪೂಜೆ, ಮಹಾಬಲಿ, ಧ್ವಜಾರೋಹಣ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಗಣಪತಿ ಭಟ್ಟ, ಆಡಳಿತ ಮೊಕ್ತೇಸರ ರಾಮಚಂದ್ರ ಹೆಬ್ಬಾರ ಸೇರಿದಂತೆ ಹದಿನೈದಕ್ಕೂ ಅಧಿಕ ಪುರೋಹಿತರಿಂದ ಧಾರ್ಮಿಕ ಕೈಂಕರ್ಯ ನೆರವೇರಿದವು.
;Resize=(128,128))
;Resize=(128,128))