ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ನಾವಲಗಿ ಗ್ರಾಮದ ಸುತ್ತ ಸೋಮವಾರ ಬೀಸಿದ ಭಾರಿ ಗಾಳಿ, ಮಳೆಗೆ ಬಾಳೆ ಬೆಳೆ ನೆಲಕಚ್ಚಿದ್ದು, ಮರಗಳು ನೆಲಕ್ಕುರುಳಿವೆ.

ಗಾಳಿಯ ಆರ್ಭಟ ಹೆಚ್ಚಾಗಿದ್ದರಿಂದ ಬಾಳೆ ಗಿಡಗಳು ಮುರಿದು ಬಿದ್ದು, ಅಪಾರ ಹಾನಿಯಾಗಿದೆ. ಜಮೀನುಗಳಲ್ಲಿ ಮರಗಳು ಬುಡ ಸಮೇತ ಬಿದ್ದಿವೆ.

ಶ್ರೀಶೈಲ ಕಾಂತಿ, ಗುರುಲಿಂಗಪ್ಪ ಶೇಗುಣಸಿ, ಗೋವಿಂದ ಪಾಟೀಲ ಹೀಗೆ ಹಲವಾರು ರೈತರ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಫಸಲು ಹಾನಿಗೀಡಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಷ್ಟ ಉಂಟಾಗಿರುವ ಬೆಳೆಗಳಿಗೆ ಪರಿಹಾರ ಒದಗಿಸಿಕೊಡಲು ಮುಂದಾಗಬೇಕೆಂದು ಶ್ರೀಶೈಲ ಕಾಂತಿ ಒತ್ತಾಯಿಸಿದರು.

ಕಳೆದ ವಾರವೂ ಇದೇ ರೀತಿ ಗಾಳಿ, ಮಳೆಗೆ ಜಗದಾಳ ಗ್ರಾಮದ ಸುತ್ತ ಬಾಳೆ ಹಾನಿಯಾಗಿತ್ತು. ಇದೀಗ ಮತ್ತೆ ಗಾಳಿಗೆ ಬೆಳೆಹಾನಿಯಾಗಿರುವುದು ರೈತರನ್ನು ಕಂಗಾಲು ಮಾಡಿದೆ.