ಸಾರಾಂಶ
ಸಂಡೂರು: ತಾಲೂಕಿನ ಯರ‍್ರಯ್ಯನಹಳ್ಳಿ ಗ್ರಾಪಂ ವ್ಯಾಪ್ತಿಯ ಎಂ.ತುಂಬರಗುದ್ದಿ ಗ್ರಾಮದ ರೈತ ಅಬ್ದುಲ್ ಸಾದಿಕ್ ಎಂಬವರ ತೋಟದಲ್ಲಿ ಬೆಳೆದಿದ್ದ ಬಾಳೆ ಬೆಳೆ ಭಾನುವಾರ ಸಂಜೆ ಬೀಸಿದ ಗಾಳಿ-ಮಳೆಗೆ ನೆಲಕ್ಕೊರಗಿದೆ. ಇದರಿಂದ ರೈತ ಅಪಾರ ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ.
ಈ ಕುರಿತು ಕನ್ನಡಪ್ರಭದೊಂದಿಗೆ ತಮ್ಮ ಅಳಲು ತೋಡಿಕೊಂಡ ರೈತ ಅಬ್ದುಲ್ ಸಾದಿಕ್, ೨ ಎಕರೆ ೨೨ ಸೆಂಟ್ಸ್ ತೋಟದಲ್ಲಿ ಬಾಳೆ ಬೆಳೆದಿದ್ದೆ. ಮಿಶ್ರ ಬೆಳೆಯಾಗಿ ಅಡಿಕೆ ಬೆಳೆದಿದ್ದೆ. ಇನ್ನೊಂದು ತಿಂಗಳಾಗಿದ್ದರೆ ಬಾಳೆ ಬೆಳೆ ಕಟಾವಿಗೆ ಬರುತ್ತಿತ್ತು. ಒಂದೊಂದು ಗೊನೆ ಸುಮಾರು ೪೦ ಕೆಜಿ ತೂಗುತ್ತಿತ್ತು. ಶಿವಮೊಗ್ಗದ ವ್ಯಾಪಾರಿಗಳು ಬಂದು ಬೆಳೆ ನೋಡಿ, ಖರೀದಿಗಾಗಿ ಅಡ್ವಾನ್ಸ್ ಕೊಡಲು ಬಂದಿದ್ದರು. ನಾನು ಕಟಾವಿಗೆ ಬಂದಾಗ ಆಗಿನ ದರ ನೋಡಿ ಮಾತನಾಡಿದರಾಯಿತು ಎಂದು ಹೇಳಿ ಕಳುಹಿಸಿದ್ದೆ. ಭಾನುವಾರ ಬೀಸಿದ ಗಾಳಿ ಮತ್ತು ಮಳೆಯಿಂದಾಗಿ ಬಾಳೆ ಬೆಳೆ ಸಂಪೂರ್ಣ ನೆಲಕ್ಕೊರಗಿದೆ. ಲಕ್ಷಾಂತರ ಮೌಲ್ಯದ ಬಾಳೆ ಬೆಳೆ ನಷ್ಟವಾಗಿದೆ. ಅಡಿಕೆ ಗಿಡಗಳು ಬಿದ್ದಿವೆ ಎಂದರು.ಇಳೆಗೆ ತಂಪೆರೆದ ಮಳೆ: ಸಂಡೂರು ತಾಲೂಕಿನ ವಿವಿಧೆಡೆ ಭಾನುವಾರ ಸುರಿದ ಮಳೆ ಇಳೆಗೆ ತಂಪೆರೆದಿದೆ. ಬಿಸಿಲಿನ ಬೇಗೆಯಿಂದ ಉಸ್ಸಪ್ಪ ಎನ್ನುತ್ತಿದ್ದವರು ನೆಲ ತಂಪಾಗಿ ಬೀಸುತ್ತಿರುವ ತಂಗಾಳಿಗೆ ನಿಟ್ಟುಸಿರು ಬಿಡುತ್ತಿದ್ದಾರೆ. ಜಿನುಗಿದ ಮಳೆ ರೈತಾಪಿ ವರ್ಗಕ್ಕೆ ಮುಗುಳುನಗೆ ಬೀರಿದೆ.ಸಂಡೂರು, ಚೋರುನೂರು, ಕುರೆಕುಪ್ಪ, ವಿಠಲಾಪುರ ಮಳೆ ಮಾಪನ ಕೇಂದ್ರಗಳಲ್ಲಿ ಭಾನುವಾರ ಕ್ರಮವಾಗಿ ೮.೨ ಮಿ.ಮೀ., ೨೫.೩ ಮಿ.ಮೀ., ೧೪.೨ ಮಿ.ಮೀ. ಹಾಗೂ ೪೮.೨ ಮಿ.ಮೀ. ಮಳೆ ದಾಖಲಾಗಿದೆ.ತಾಲೂಕಿನ ಬೊಮ್ಮಾಘಟ್ಟ ಗ್ರಾಮದ ೨ನೇ ವಾರ್ಡಿನ ಮೂಲಕ ಶ್ರೀಹುಲಿಕುಂಟೇರಾಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆ ಹದಗೆಟ್ಟಿದೆ. ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ಇದರಿಂದ ಸಾರ್ವಜನಿಕರ ಓಡಾಡಲು ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಮಾಡಿ, ರಸ್ತೆಯಲ್ಲಿ ನಿಲ್ಲುವ ನೀರು ಸರಾಗವಾಗಿ ಹರಿದು ಚರಂಡಿ ಸೇರುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಂಡು ಈ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.