ಜಾತ್ರಾಮಹೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ಪಲ್ಲಕ್ಕಿ ಉತ್ಸವ ಹಾಗೂ ಉಚ್ಚಾಯ ಮಹೋತ್ಸವ ಸೇರಿದಂತೆ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ದೇವಾಂಗ ಸಮಾಜದ ಕುಲದೇವತೆ, ಗ್ರಾಮದ ಆರಾಧ್ಯ ದೇವತೆ ಬನಶಂಕರಿದೇವಿ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಭಕ್ತಿ-ಭಾವಗಳ ನಡುವೆ ಸಡಗರ, ಸಂಭ್ರಮದಿಂದ ಮಹಾರಥೋತ್ಸವ ಜರುಗಿತು.

ಜಾತ್ರಾಮಹೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ಪಲ್ಲಕ್ಕಿ ಉತ್ಸವ ಹಾಗೂ ಉಚ್ಚಾಯ ಮಹೋತ್ಸವ ಸೇರಿದಂತೆ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಶುಕ್ರವಾರ ಬೆಳಗ್ಗೆ ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ಬೆಳಗ್ಗೆಯಿಂದ ವಿಶೇಷ ಪೂಜೆ, ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಅನೇಕ ಪೂಜೆಗಳು ನಡೆದವು. ಸಾಂಪ್ರದಾಯಿಕವಾಗಿ ರಥಾಂಗ ಹೋಮ,ಹವನ ಪೂಜೆ ನೆರವೇರಿಸಿದರು.

ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಹರಕೆ ಹೊತ್ತಿರುವ ಭಕ್ತರು ಹರಕೆ ತೀರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಭಕ್ತರಿಂದ ಬನಶಂಕರಿ ನಿನ್ನ ಪಾದಕ ಶಂಭೂಕೋ ಆದಿಶಕ್ತಿ ಪರಮೇಶ್ವರಿ ನಿನ್ನ ಪಾದಕ ಶಂಭೂಕೋ ಎಂಬ ಭಕ್ತಿಯ ಘೋಷಣೆ ಕೇಳಿ ಬಂದವು. ರಥೋತ್ಸವ ಜರುಗುವಾಗ ಭಕ್ತರ ಜಯ ಘೋಷಣೆಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಭಕ್ತರು ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ದೋಟಿಹಾಳ, ಕೇಸೂರು, ಹೆಸರೂರು, ನಡುವಲಕೊಪ್ಪ, ಕ್ಯಾದಿಗುಪ್ಪ, ಗೋತಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.