ಸಾರಾಂಶ
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆ ತೇರು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ಕಳುಹಿಸಲಾಯಿತು. ಹಗ್ಗವನ್ನು ಗ್ರಾಮಸ್ಥರು ಭಕ್ತಿ, ಸಡಗರದಿಂದ ಸೋಮವಾರ ಬೆಳಗ್ಗೆ ಹಳಿ ಬಂಡಿಯಲ್ಲಿಟ್ಟುಕೊಂಡು ಮೆರವಣಿಗೆ ಮೂಲಕ ಬನಶಂಕರಿದೇವಿ ಸನ್ನಿಧಾನಕ್ಕೆ ತೆರಳಿದರು.
ರೋಣ: ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆ ತೇರು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ಕಳುಹಿಸಲಾಯಿತು.
ಹಗ್ಗವನ್ನು ಗ್ರಾಮಸ್ಥರು ಭಕ್ತಿ, ಸಡಗರದಿಂದ ಸೋಮವಾರ ಬೆಳಗ್ಗೆ ಹಳಿ ಬಂಡಿಯಲ್ಲಿಟ್ಟುಕೊಂಡು ಮೆರವಣಿಗೆ ಮೂಲಕ ಬನಶಂಕರಿದೇವಿ ಸನ್ನಿಧಾನಕ್ಕೆ ತೆರಳಿದರು. ಸೋಮವಾರ ಸಂಜೆ ಜಾತ್ರೆ ನಡೆಯಿತು.ಮಾಡಲಗೇರಿ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ತೇರಿನ 2 ಹಗ್ಗಗಳನ್ನು 2 ಪ್ರತ್ಯೇಕ ಹಳಿ ಬಂಡಿಗಳಲ್ಲಿಟ್ಟು ವಿವಿಧ ವಾದ್ಯಮೇಳ, ಜಯಘೋಷದೊಂದಿಗೆ ಪ್ರಯಾಣ ಆರಂಭಿಸಲಾಯಿತು. ಮಾಡಲಗೇರಿ ಮೂಲಕ ನೈನಾಪುರ, ಬೇಲೂರ, ನಸಬಿ, ಚೊಳಚಗುಡ್ಡ ಕ್ರಾಸ್ ಮಾರ್ಗವಾಗಿ ಬನಶಂಕರಿಗೆ ತೆರಳಿತು.
ಹೊಳೆ ದಾಟದೇ ಸುತ್ತುವರಿದು ಪ್ರಯಾಣ: ಬನಶಂಕರಿದೇವಿ ಜಾತ್ರಾ ರಥಕ್ಕೆ 8 ಇಂಚು ದಪ್ಪದ ಪುಡಿನಾರಿನಿಂದ ಉರಿಗೊಳಿದ 250 ಅಡಿ ಉದ್ದ ಹಾಗೂ 450 ಕೆಜಿ ತೂಕದ 2 ಹಗ್ಗಗಳನ್ನು ಪ್ರತ್ಯೆಕವಾಗಿ 2 ಹಳಿ ಬಂಡಿಯಲ್ಲಿಟ್ಟು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಪ್ರತಿ ವರ್ಷ ಮಾಡಲಗೇರಿ ಗ್ರಾಮದಿಂದ 20 ಕಿಮೀ ದೂರದ ಬನಶಂಕರಿಗೆ ನೈನಾಪುರ, ಡಾಣಕಶಿರೂರ, ಮಣ್ಣೇರಿ ಮೂಲಕ ಮಲಪ್ರಭೆ ನದಿ ದಾಟಿ ಚೋಳಚಗುಡ್ಡ ಗ್ರಾಮ ಮಾರ್ಗವಾಗಿ ಬನಶಂಕರಿ ತಲುಲುಪಲಾಗುತ್ತಿತ್ತು. ಹಳಿಬಂಡಿ ನದಿ ದಾಟುವಾಗ ಆ ವೈಭವ ನೋಡಲು ಸಾವಿರಾರು ಜನರು ನೆರೆದಿರುತ್ತಿದ್ದರು. ಆದರೆ ಈ ಬಾರಿ ಮಲಪ್ರಭೆ ಹೊಳೆಯಲ್ಲಿ ಪ್ರತಿ ವರ್ಷಕ್ಕಿಂತ ನೀರಿನ ಹರಿವು ಹೆಚ್ಚಿರುವುದು ಮತ್ತು ರಸ್ತೆ ಹದಗೆಟ್ಟಿದ್ದರಿಂದ ಮಾಡಲಗೇರಿ, ನೈನಾಪುರದಿಂದ ಸುತ್ತುವರಿದು ಬೇಲೂರ, ನಸಬಿ, ಚೋಳಚಗುಡ್ಡ ಕ್ರಾಸ್ ಮಾರ್ಗವಾಗಿ ತೆರಳಲಾಯಿತು. ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿ ಹಳಿಬಂಡಿ ಮೇರವಣಿಗೆ ಸಂಭ್ರಮವನ್ನು ಕಣ್ತುಂಬಿಕೊಂಡರು. ಈ ಮಧ್ಯೆ ಚೋಳಚಗುಡ್ಡ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆಗೈಯ್ಯಲಾಯಿತು.