ಬನಶಂಕರಿದೇವಿ ಭಾವೈಕ್ಯತಾ ಜಾತ್ರಾ ಮಹೋತ್ಸವ

| Published : Nov 10 2024, 02:05 AM IST

ಸಾರಾಂಶ

ಜಾತ್ಯಾತೀತ, ಪಕ್ಷಾತೀತ ಸುವರ್ಣ ಮಹೋತ್ಸವವಾಗಿದ್ದು. ಯಶಸ್ವಿಗೊಳಿಸುವ ನಿಟ್ಟಿನಲ್ಲಿ, ಐದು ಅರ್ಥಪೂರ್ಣ ಕಾರ್ಯಕ್ರಮ ಜರಗುವುದು

ಕನ್ನಡಪ್ರಭ ವಾರ್ತೆ ಅಮೀನಗಡ

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಸೂಳೇಬಾವಿ ಗ್ರಾಮದಲ್ಲಿ ಕಳೆದ 49 ವರ್ಷಗಳಿಂದ ಗ್ರಾಮದ ಸರ್ವಸಮಾಜ ಬಾಂಧವರು ಶ್ರೀ ಬನಶಂಕರಿದೇವಿ ಭಾವೈಕ್ಯತಾ ಜಾತ್ರಾ ಮಹೋತ್ಸವ ಆಚರಿಸುತ್ತ ಬಂದಿದ್ದು, 2025ನೇ ಇಸ್ವಿ ಭಾರತಹುಣ್ಣಿಮೆಗೆ 50 ವರ್ಷಗಳಾಗುತ್ತವೆ.

ಗ್ರಾಮದ ಮುಸ್ಲಿಂ ಸಮಾಜ ಬಾಂಧವರಿಂದ ಗರುಡಪಠ ಕಟ್ಟುವ ಮೂಲಕ ಜಾತ್ರೆಗೆ ಚಾಲನೆ ದೊರೆತು, ದಲಿತ ಸಮಾಜ ಬಾಂಧವರಿಂದ ಶ್ರೀದೇವಿಗೆ ಅಭಿಷೇಕ, ಸರ್ವಸಮಾಜ ಭಾಂಧವರೂ ಬಾಬುಗಳ ಮೂಲಕ ಶ್ರೀದೇವಿಯಸೇವೆ ಸಲ್ಲಿಸುವ ಮೂಲಕ ಭಾವೈಕ್ಯತಾ ಜಾತ್ರಾ ಆಚರಿಸಲಾಗುತ್ತಿದೆ. ಜಾತ್ರಾ ಸುವರ್ಣ ಮಹೋತ್ಸವದ ಯಶಸ್ವಿಗಾಗಿ ಜಾತ್ರಾ ಸಮಿತಿ ಗ್ರಾಮಸ್ಥರ ಅಭಿಪ್ರಾಯ, ಸಲಹೆ, ಸೂಚನೆಗಳಿಗಾಗಿ ಪೂರ್ವಭಾವಿ ಸಭೆ ಕರೆದಿತ್ತು. ಜಾತ್ರಾ ಸಮಿತಿ ಸುವರ್ಣ ಮಹೋತ್ಸವ ವೈವಿದ್ಯತೆಯಿಂದ ಆಚರಿಸಲು ನಿರ್ಧರಿಸಿತು.

ಶ್ರೀ ಬನಶಂಕರೀದೇವಿ ಭಾವೈಕ್ಯತಾ ಜಾತ್ರಾ ಸಮಿತಿ ಅಧ್ಯಕ್ಷ, ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಹಿಂದಿನ ಹಿರಿಯರು ಗ್ರಾಮ ಭಾವೈಕ್ಯತೆಯಿಂದ ಬದುಕುಸಾಗಿಸಲಿ, ಇತರೆ ಗ್ರಾಮಗಳಿಗೆ ಆದರ್ಶಪ್ರಾಯವಾಗಿರಲೆಂಬ ಉದ್ದೇಶದಿಂದ ಬನಶಂಕರೀದೇವಿ ಭಾವೈಕ್ಯತಾ ಜಾತ್ರೆಗೆ ಅಂದು ಚಾಲನೆ ನೀಡಿದ್ದರು. ಮುಂದಿನ ಪೀಳಿಗೆ ಅದನ್ನು ಮುಂದುವರೆಸಿಕೊಂಡು ಬಂದಕಾರಣ ಇಂದು ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟಿದ್ದೇವೆ. ಅದಕ್ಕಾಗಿ ಈ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಸುವರ್ಣ ಮಹೋತ್ಸವ ಅರ್ಥಪೂರ್ಣವಾಗಿ ಇಂದಿನ ಮುಂದಿನ ಪೀಳಿಗೆಗೂ ದಾರಿದೀಪವಾಗುವ ನಿಟ್ಟಿನಲ್ಲಿ ಆಚರಿಸಿ ಯಶಸ್ವಿಯಾಗುವಂತೆ ಸಲಹೆ ನೀಡಿ ಎಂದರು.

ಮಾಜಿ ಶಾಸಕ, ಬನಶಂಕರೀದೇವಿ ಭಾವೈಕ್ಯತಾ ಜಾತ್ರಾ ಮನರಂಜನಾ ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಇದು ಜಾತ್ಯಾತೀತ, ಪಕ್ಷಾತೀತ ಸುವರ್ಣ ಮಹೋತ್ಸವವಾಗಿದ್ದು. ಯಶಸ್ವಿಗೊಳಿಸುವ ನಿಟ್ಟಿನಲ್ಲಿ, ಐದು ಅರ್ಥಪೂರ್ಣ ಕಾರ್ಯಕ್ರಮ ಜರಗುವುದು, ಸ್ಮರಣೆ ಸಂಚಿಕೆ ಬಿಡುಗಡೆ, ಜಾತ್ಯಾತೀತ ಅಡಿಗಲ್ಲು ಹಾಕಿದ ಹಿಂದಿನ ಹಿರಿಯರ ಪುಣ್ಯಸ್ಮರಣೆ, ನಾಟಕೋತ್ಸವ, ಕ್ರೀಡೋತ್ಸವ, ಸಾಮೂಹಿಕ ವಿವಾಹ, ಮನರಂಜನಾ ಕಾರ್ಯಕ್ರಮ, ರೈತಗೋಷ್ಠಿ, ಗ್ರಾಮದಲ್ಲಿ ಸಾಧನೆಗೈದವರಿಗೆ ಗೌರವ ಸನ್ಮಾನ, ವಿವಿಧ ಧಾರ್ಮಿಕ ಗುರುಗಳಿಗೆ, ವಿವಿಧ ಪಕ್ಷಗಳ ಮುಖಂಡರಿಗೆ,ನಾಡಿನ ಶ್ರೇಷ್ಠ ಚಿಂತಕರು, ಅನುಭಾವಿಗಳಿಗೆ ಆಹ್ವಾನ ಮಾಡಲಾಗುವುದು. ಪ್ರತಿದಿನ ಒಂದು ಹೊತ್ತು ದಾಸೋಹ ಏರ್ಪಡಿಸಲಾಗುವುದು, ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ 31 ವಿವಿಧ ಸಮಿತಿಗಳ ರಚನೆ ಮಾಡಲಾಗುವುದು ಎಂದರು. ಗ್ರಾಮಸ್ಥರು ಚಪ್ಪಾಳೆ ತಟ್ಟುವ ಮೂಲಕ ಒಪ್ಪಿಗೆ ಸೂಚಿಸಿದರು.

ಕೆ.ಎಸ್.ರಾಮದುರ್ಗ ಜಾತ್ರಾ ಸಮಿತಿಯ ಲೆಕ್ಕಪತ್ರ ವರದಿವಾಚನ ಮಾಡಿದರು. ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಉಪಾಧ್ಯಕ್ಷ ಯಮನೂರಪ್ಪ ಶಿಲ್ಪಿ, ಜಾತ್ರಾ ಸಮಿತಿಯ ಉಪಾಧ್ಯಕ್ಷ ದುರ್ಗಪ್ಪ ಹೊಸಮನಿ, ಜಾತ್ರಾ ಸಮಿತಿಯ ರೇವಪ್ಪ ನೆಮದಿ ಇದ್ದರು. ಗ್ರಾಮದ ವಿವಿಧ ಸಮಾಜಗಳ ಹಿರಿಯರು, ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿದ್ದರು. ಗಾಯಕ ಮಾನು ಹೊಸಮನಿ ಪ್ರಾರ್ಥನೆ, ಮಲ್ಲಿಕಾರ್ಜುನ ಸಜ್ಜನ ನಿರೂಪಣೆ, ಶಂಕರಪ್ಪ ರಾಮದುರ್ಗ ವಂದಿಸಿದರು.