ಸಾರಾಂಶ
ಚನ್ನಪಟ್ಟಣ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ಹೊತ್ತಲ್ಲೇ ಬಂಡೆ ಬ್ರದರ್ಸ್ ಖ್ಯಾತಿಯ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು, ದಳಪತಿ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ದೊಡ್ಡ ಮಟ್ಟದ ಶಾಕ್ ನೀಡಿದ್ದಾರೆ.
ದಳಪತಿ ಭದ್ರಕೋಟೆ ಚನ್ನಪಟ್ಟಣದಲ್ಲಿ ರಹಸ್ಯ ಆಪರೇಷನ್ ನಡೆಸಿ ಜೆಡಿಎಸ್‌ನ ೯ ನಗರಸಭೆ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯೆಯನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದು, ಚುನಾವಣೆ ಹೊತ್ತಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಠಕ್ಕರ್ ನೀಡಿದ್ದಾರೆ.ಸದ್ದಿಲ್ಲದೇ ಆಪರೇಷನ್ ಹಸ್ತ ನಡೆಸಿದ ಡಿ.ಕೆ.ಸಹೋದರರು ಗುರುವಾರ ತಡರಾತ್ರಿ ೯ ಮಂದಿ ಜೆಡಿಎಸ್ ನಗರಸಭೆ ಸದಸ್ಯರು ಹಾಗೂ ಇವರೊಟ್ಟಿಗೆ ಒಬ್ಬ ಪಕ್ಷೇತರ ಸದಸ್ಯೆಯನ್ನು ಕಾಂಗ್ರೆಸ್‌ಗೆ ಸೆಳೆದಿದ್ದು, ಇವರೆಲ್ಲ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ಸದಸ್ಯರಾದ ಎಂ.ಜೆ.ರೇವಣ್ಣ, ವಿ.ಸತೀಶ್ ಬಾಬು, ಸಿ.ಜೆ.ಲೋಕೇಶ್, ಶ್ರೀನಿವಾಸಮೂರ್ತಿ, ನಾಗೇಶ್, ಸೈಯ್ಯದ್ ರಫೀಕ್ ಅಹಮದ್ ಕುನುಮೀರಿ, ಅಭಿದಾಬಾನು, ಭಾನುಪ್ರಿಯ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಪಕ್ಷೇತರ ಸದಸ್ಯೆ ಉಮಾ ಸಹ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.ಚನ್ನಪಟ್ಟಣ ನಗರಸಭೆಯ ಜೆಡಿಎಸ್ ಸದಸ್ಯರ ಪೈಕಿ ಮೂರನೇ ಎರಡಷ್ಟು ಮಂದಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ತಮ್ಮನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸಿ ನಗರಸಭೆಯಲ್ಲಿ ತಮಗೆ ಕಾಂಗ್ರೆಸ್ ಸದಸ್ಯರ ಜತೆ ಕೂರಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದಾರೆ.
ಚುನಾವಣೆ ಹೊಸ್ತಿಲಲ್ಲೇ ದೊಡ್ಡ ಶಾಕ್:ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ದುಪ್ಪಟ್ಟು ಬಲ ಬಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಅತಿ ಹೆಚ್ಚು ಲೀಡ್ ಕೊಡಿಸಬೇಕು ಎಂದು ಎರಡು ಪಕ್ಷದ ನಾಯಕರು ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಸದ್ದಿಲ್ಲದೇ ಆಪರೇಷನ್ ನಡೆಸಿರುವ ಡಿ.ಕೆ.ಸಹೋದರರು ಅದರಲ್ಲಿ ಯಶಸ್ವಿ ಆಗಿದ್ದಾರೆ.
ಕಳಚಿದ ಅಮಿತೋತ್ಸವ ಗುಂಗು!:ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರವಷ್ಟೇ ಬೊಂಬೆನಾಡಿನಲ್ಲಿ ಮೈತ್ರಿ ಅಭ್ಯರ್ಥಿ ಮಂಜುನಾಥ್ ಪರ ಭರ್ಜರಿ ರೋಡ್ ಶೋ ನಡೆಸಿದ್ದರು. ಇದಲ್ಲದೇ ಗುರುವಾರ ರಾಮನಗರದಲ್ಲಿ ಅಮಿತ್ ಶಾ, ಮಂಡ್ಯದಲ್ಲಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ಮಾಡಿದ್ದರು. ಇವರಿಬ್ಬರು ನಾಮಪತ್ರ ಸಲ್ಲಿಕೆ ಮಾಡಿದ ಶಕ್ತಿ ಪ್ರದರ್ಶನ ಮಾಡಿದ ಕೆಲವೇ ತಾಸಿನಲ್ಲೇ ಜೆಡಿಎಸ್ ನಗರಸಭೆ ಸದಸ್ಯರಲ್ಲಿ ೯ಮಂದಿಯನ್ನು ಆಪರೇಷನ್ ಖೆಡ್ಡಾಗೆ ಬೀಳಿಸುವ ಮೂಲಕ ಡಿ.ಕೆ.ಸಹೋದರರು ಟಾಂಗ್ ನೀಡಿದ್ದಾರೆ.
ಸದ್ದಿಲ್ಲದೇ ನಡೆದಿದೆ ಆಪರೇಷನ್:ಗುರುವಾರ ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಲವು ಕಡೆ ಪ್ರಚಾರ ನಡೆಸಿದ ಸಂಸದ ಡಿ.ಕೆ.ಸುರೇಶ್, ಈ ವೇಳೆ ಸಾಕಷ್ಟು ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಒಂದು ಕಡೆ ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿದ್ದರೆ, ಇನ್ನೊಂದು ಕಡೆ ಖುದ್ದು ಡಿ.ಕೆ.ಸುರೇಶ್ ಆಪರೇಷನ್ ಹಸ್ತ ನಡೆಸುವ ಮೂಲಕ ಬೇರೆ ಪಕ್ಷದ ಕಾರ್ಯಕರ್ತರನ್ನು ಸೆಳೆಯುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಚನ್ನಪಟ್ಟಣವೇ ಟಾರ್ಗೆಟ್:ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಸಹೋದರರ ಪಾಲಿಗೆ ಚನ್ನಪಟ್ಟಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬದ್ಧ ರಾಜಕೀಯ ವೈರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಒಂದಾಗಿರುವುದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಬಲಿಷ್ಠಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುರೇಶ್ ಜೆಡಿಎಸ್-ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದಾರೆ. ಸ್ಥಳೀಯ ಮುಖಂಡರಿಗೆ ಕಾರ್ಯಕರ್ತರನ್ನು ಸೆಳೆಯುವ ಟಾಸ್ಕ್ ನೀಡುವ ಜತೆಗೆ ತಾವೂ ಆಪರೇಷನ್ ಹಸ್ತ ನಡೆಸಿದ್ದಾರೆ.
ಈಗಾಗಲೆ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಹರೂರು ರಾಜಣ್ಣ, ಸಿಂಗರಾಜಿಪುರ ರಾಜಣ್ಣ ಮುಂತಾದ ಮುಖಂಡರನ್ನು ಕಾಂಗ್ರೆಸ್‌ಗೆ ಸೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಬಾಕ್ಸ್................
ಕಳೆದ ವರ್ಷವೂ ಆಪರೇಷನ್ ಸದ್ದು!ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆ ವೇಳೆಯಲ್ಲಿಯೂ ಸಹ ಕ್ಷೇತ್ರದಲ್ಲಿ ಆಪರೇಷನ್ ಸದ್ದು ಜೋರಾಗಿಯೆ ಕೇಳಿಬಂದಿತ್ತು. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಜಿಗಿದಿದ್ದರು.
ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಇರುವ ಹೊತ್ತಿನಲ್ಲೇ ಸ್ವಾಭಿಮಾನ ಸಂಕಲ್ಪ ಯಾತ್ರೆ ನಡೆಸಿದ್ದ ಸಿ.ಪಿ.ಯೋಗೇಶ್ವರ್ ದೊಡ್ಡ ಮಟ್ಟದಲ್ಲೇ ಆಪರೇಷನ್ ಕಮಲ ಕಾರ್ಯಚರಣೆ ನಡೆಸಿದ್ದರು. ಚುನಾವಣೆ ಹೊತ್ತಿಗೆ ಜೆಡಿಎಸ್‌ನಿಂದ ಸಹ ರಿವರ್ಸ್ ಆಪರೇಷನ್ ನಡೆದಿತ್ತು. ಈ ಆಪರೇಷನ್‌ನಿಂದ ಯಾರಿಗೆಷ್ಟು ಲಾಭವಾಯಿತೋ ಗೊತ್ತಿಲ್ಲ. ಇದೀಗ ಕ್ಷೇತ್ರದಲ್ಲಿ ಮತ್ತೆ ಪಕ್ಷಾಂತರ ಭರಾಟೆ ಮುಂದುವರಿದಿದೆ. ಪೊಟೋ೫ಸಿಪಿಟಿ೧:ಬೆಂಗಳೂರಿನಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ನಗರಸಭೆ ಸದಸ್ಯರು.