ಲಕ್ಷ್ಮೇಶ್ವರ : ಕಾಡು ಪ್ರಾಣಿಗಳಿಗೆ ಜೀವದಾಯಿ ಶೆಟ್ಟಿಕೇರಿ ಕೆರೆ

| Published : Apr 06 2024, 12:53 AM IST / Updated: Apr 07 2024, 10:53 AM IST

ಲಕ್ಷ್ಮೇಶ್ವರ : ಕಾಡು ಪ್ರಾಣಿಗಳಿಗೆ ಜೀವದಾಯಿ ಶೆಟ್ಟಿಕೇರಿ ಕೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಶೆಟ್ಟಿಕೇರಿ ಕೆರೆಯು ಬೇಸಿಗೆಯಲ್ಲಿಯೂ ಬತ್ತದೆ ಕಪ್ಪತ್ತಗುಡ್ಡದ ಅಕ್ಕಪಕ್ಕದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಕಾಡು ಪ್ರಾಣಿಗಳಿಗೆ, ಪಕ್ಷಿಗಳಿಗೆ ಜೀವ ಉಳಿಸುವ ಜೀವದಾಯಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು

ಅಶೋಕ ಸೊರಟೂರ 

ಲಕ್ಷ್ಮೇಶ್ವರ : ತಾಲೂಕಿನ ಬೃಹತ್ ಕೆರೆಗಳಲ್ಲಿ ಒಂದಾದ ಶೆಟ್ಟಿಕೇರಿ ಕೆರೆ, ಬಿರು ಬೇಸಿಗೆಯಲ್ಲಿ ಹಾಗೂ ಬರಗಾಲದ ಸಂದರ್ಭದಲ್ಲೂ ಬತ್ತದೆ ಕಪ್ಪತ್ತಗುಡ್ಡದ ತಪ್ಪಲಿನ ಕಾಡುಪ್ರಾಣಿಗಳಿಗೆ ಜೀವದಾಯಿಯಾಗಿದೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿನ ಶೆಟ್ಟಿಕೇರಿ ಗ್ರಾಮದ ಪಕ್ಕದಲ್ಲಿ ಸುಮಾರು 134 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾಗಿರುವ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುವ ಕಾರ್ಯವು ನಡೆಯುತ್ತಿದೆ. ಪ್ರತಿವರ್ಷ ಲಕ್ಷಾಂತರ ರೂಪಾಯಿಗಳ ಮೀನು ಮಾರಾಟ ನಡೆಯುತ್ತಿದೆ.

ನಮ್ಮ ಭಾಗದ ಅಪರೂಪದ ಜಲಚರ ಪ್ರಾಣಿಗಳಲ್ಲಿ ಒಂದಾದ ನೀರು ನಾಯಿ ಈ ಕೆರೆಯಲ್ಲಿ ಕಾಣಿಸಿಕೊಂಡು ಪ್ರಾಣಿ ಪ್ರೀಯರ ಉತ್ಸಾಹ ಹೆಚ್ಚುವಂತೆ ಮಾಡಿದೆ.

ಶೆಟ್ಟಿಕೇರಿಯಲ್ಲಿ ಕಳೆದ ಹಲವು ವರ್ಷಗಳಿಂದ ವಿದೇಶಿ ಪಕ್ಷಿಗಳು ಬಂದು ನೆಲೆಸುತ್ತಿವೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಬಾರ್ ಹೆಡ್ಡೆಡ್ ಗ್ರೂಸ್ ಸೇರಿದಂತೆ ಅನೇಕ ಪಕ್ಷಿಗಳು ಸಾವಿರಾರು ಕಿಲೋಮೀಟರ್ ದೂರ ಕ್ರಮಿಸಿ ಚಳಿಗಾಲದಲ್ಲಿ ಆಹಾರಕ್ಕಾಗಿ ಇಲ್ಲಿಗೆ ಆಗಮಿಸುತ್ತವೆ.

ಶೆಟ್ಟಿಕೇರಿ ಕೆರೆಯು ಬೇಸಿಗೆಯಲ್ಲಿಯೂ ಬತ್ತದೆ ಕಪ್ಪತ್ತಗುಡ್ಡದ ಅಕ್ಕಪಕ್ಕದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಕಾಡು ಪ್ರಾಣಿಗಳಿಗೆ, ಪಕ್ಷಿಗಳಿಗೆ ಜೀವ ಉಳಿಸುವ ಜೀವದಾಯಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ತಾಲೂಕಿನ ತುಂಬಾ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿರುವ ವೇಳೆ ಹಾಗೂ ಮುಂಗಾರು ಹಂಗಾಮಿನ ಮಳೆಗಳು ಕೈಕೊಟ್ಟಿರುವ ಸಂದರ್ಭದಲ್ಲಿ ಶೆಟ್ಟಿಕೇರಿ ಕೆರೆಯಲ್ಲಿ ನೀರು ನಿಂತು ಕೊಂಡಿರುವುದು ಪ್ರಕೃತಿಯ ತನ್ನ ಮಡಿಲಲ್ಲಿ ಜೀವಿಸುವ ಮೂಕ ಕಾಡು ಪ್ರಾಣಿಗಳ ಜೀವ ಉಳಿಸುವ ಕಾರ್ಯ ಮಾಡುವ ಸಲುವಾಗಿ ಎಂದರೆ ತಪ್ಪಾಗಲಾರದು.

ಶೆಟ್ಟಿಕೇರಿ ಕೆರೆಯ ನೀರು ನೂರಾರು ಕೊಳವೆ ಬಾವಿಗಳು ಅಂತರ್ಜಲ ಹೆಚ್ಚಿಸುವ ಮೂಲಕ ಕೃಷಿ ಚಟುವಟಿಕೆ. ಕುಡಿಯುವ ನೀರು ಹಾಗೂ ತೋಟಗಾರಿಕೆಯಲ್ಲಿ ನೂರಾರು ಕುಟುಂಬಗಳು ಉತ್ತಮ ಬೆಳೆ ತೆಗೆಯುವ ಮೂಲಕ ಉತ್ತಮ ಬದುಕು ಕಟ್ಟಿಕೊಂಡಿವೆ.

ಬರಗಾಲ ತಾಂಡವವಾಡುತ್ತಿರುವ ವೇಳೆಯಲ್ಲಿ ಕೆರೆಯಲ್ಲಿನ ನೀರು ಆವಿಯಾಗಿ ಆಕಾಶ ಸೇರುತ್ತಿದ್ದರೂ ಈ ವರ್ಷದ ಬೇಸಿಗೆ ಕಾಲ ಮುಗಿಯುವವರೆಗೆ ಹಾಗೆ ಇದ್ದು ಕಾಡಂಚಿನ ಪ್ರಾಣಿಗಳ ಜೀವ ಉಳಿಸುವ ಕಾರ್ಯ ಮಾಡಲಿ ಎಂಬುದು ಕಾಡುಪ್ರಾಣಿ ಪ್ರಿಯರ ಆಶಯವಾಗಿದೆ.

ಶೆಟ್ಟಿಕೇರಿ ಕೆರೆಯಲ್ಲಿನ ಹೂಳು ತೆಗೆಯುವ ಮೂಲಕ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಡಬೇಕು. ಕೆರೆ ಒತ್ತುವರಿ ತಡೆಯುವ ದೃಷ್ಟಿಯಿಂದ ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಸಿ ಪ್ರಾಣಿ ಹಾಗೂ ಪಕ್ಷಿಗಳ ಜೀವ ಕಾಪಾಡುವ ಕಾರ್ಯ ಸಣ್ಣ ನೀರಾವರಿ ಇಲಾಖೆ ಮಾಡಬೇಕು ಎಂದು ಶೆಟ್ಟಿಕೇರಿಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿರುವ ಮೀನು ಸಾಕಾಣಿಕೆದಾರರ ಸಂಘದ ಅಧ್ಯಕ್ಷ ದೀಪಕ ಲಮಾಣಿ ಹೇಳಿದರು.