ಸಾರಾಂಶ
- ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಲು ಮನವಿ
- ರಾಜ್ಯದ ಎಲ್ಲ ವಿದ್ಯಾರ್ಥಿಗಳು ಹೋರಾಟಕ್ಕೆ ಕೈ ಜೋಡಿಸಲಿದ್ದು, ಬಂದ್ ಯಶಸ್ವಿಗೆ ಸಹಕರಿಸಬೇಕು - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆಯ ಯುಬಿಡಿಟಿ ಕಾಲೇಜನ್ನು ರಾಜ್ಯದ ಬಡ ವಿದ್ಯಾರ್ಥಿಗಳಿಗಾಗಿ ಉಳಿಸುವ ಸಲುವಾಗಿ ಅ.16ರಂದು ಎಐಡಿಎಸ್‌ಒ ವತಿಯಿಂದ ದಾವಣಗೆರೆ ಬಂದ್ ಕರೆ ನೀಡಲಾಗಿದೆ ಎಂದು ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರು ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ದಾವಣಗೆರೆಯ ಹೆಮ್ಮೆಯ ಸಂಸ್ಥೆ ಆಗಿರುವ ಯುಬಿಡಿಟಿಯಲ್ಲಿ ಸೀಟು ಮಾರಾಟ ಮಾಡಲಾಗುತ್ತಿದೆ. ಯುನಿವರ್ಸಿಟಿ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್ ಎಂಜಿನಿಯರಿಂಗ್ ಕಾಲೇಜು (ಯುಬಿಡಿಟಿ) ರಾಜ್ಯದ ಅತ್ಯಂತ ಹಳೇಯ ಎಂಜಿನಿಯರಿಂಗ್ ಕಾಲೇಜುಗಳಲ್ಲೊಂದು. 1951ರಲ್ಲಿ ದಾವಣಗೆರೆಯ ದಾನಿಗಳು ನೀಡಿದ್ದ ಜಾಗ, ಹಣದಲ್ಲಿ ಕಟ್ಟಿರುವ ಕಾಲೇಜು ಈಗ 73 ವರ್ಷಗಳನ್ನು ಪೂರೈಸಿ, ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ ಎಂದರು.
ಪೇಮೆಂಟ್ ಸೀಟು ದೊಡ್ಡ ದುರಂತ:7 ದಶಕಗಳಿಂದ ರಾಜ್ಯದ ಬಡ ರೈತ ಕಾರ್ಮಿಕರ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಎಂಜಿನಿಯರಿಂಗ್ ಶಿಕ್ಷಣ ಒದಗಿಸುತ್ತಿರುವ ಈ ಮಹಾನ್ ಸಂಸ್ಥೆಯ ಸೀಟುಗಳಲ್ಲಿ ಶೇ.50ರಷ್ಟು ಪೇಮೆಂಟ್ ಕೋಟಾ ನೀಟು ನೀಡಿ ಜಾರಿಗೊಳಿಸಲಾಗಿದೆ. ಈ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ 504 ಸೀಟುಗಳಲ್ಲಿ 254 ಸೀಟಗಳನ್ನು ₹97 ಸಾವಿರಕ್ಕೆ ಮಾರಲಾಗುತ್ತಿದೆ. ಇನ್ನುಳಿದ 250 ಮೆರಿಟ್ ಸೀಟುಗಳಿಗೆ ನಿಗದಿಪಡಿಸಿರುವ ₹43 ಸಾವಿರ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿದೆ. ಹೀಗಿರುವಾಗ, ಶುಲ್ಕ ಕಡಿಮೆ ಮಾಡಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು. ಅದನ್ನು ಬಿಟ್ಟು ಅರ್ಧದಷ್ಟು ಸೀಟುಗಳನ್ನು ಪೇಮೆಂಟ್‌ಗೆ ಮಾರುತ್ತಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಈ ನಡೆಯ ವಿರುದ್ದ ಈಗಾಗಲೇ ಎಐಡಿಎಸ್‌ಒ ನೇತೃತ್ವದಲ್ಲಿ ''''''''ಯುಬಿಡಿಟಿ ಉಳಿಸಿ'''''''' ಹೋರಾಟದಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ. ಕೂಡಲೇ ಪೇಮೆಂಟ್ ಕೋಟಾ ರದ್ದುಗೊಳಿಸಿ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಪ್ರತಿಷ್ಠಿತ ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿ ಸರ್ಕಾರವೇ ವಹಿಸಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಸೆ ಎಂದರು.ಬೇಡಿಕೆ ಈಡೇರಿಸಲು ಆಗ್ರಹಿಸಿ, ಸೆ.10ರಂದು ಕಾಲೇಜಿನಿಂದ ಜಯದೇವ ವೃತ್ತದವರೆಗೂ ಮೆರವಣಿಗೆ ಮಾಡಿ, ಪ್ರತಿಭಟಿಸಲಾಗಿದೆ. ಸೆ.24ರಂದು ನಾಡಿನ ಗಣ್ಯರು, ನಿವೃತ್ತ ಪ್ರಾಚಾರ್ಯರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ, ಕುವೆಂಪು ಕನ್ನಡ ಭವನದಲ್ಲಿ ವಿದ್ಯಾರ್ಥಿಗಳ ಪ್ರತಿಭಟನಾ ಸಮಾವೇಶ ನಡೆಸಲಾಗಿದೆ. ಅನಂತರ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ''''''''ಯುಬಿಡಿಟಿ ಉಳಿಸಿ'''''''' ಎಂಬ ಒಕ್ಕೊರಲಿನ ಘೋಷಣೆಯ ಮನವಿ ಹಾಗೂ ಸಾವಿರಾರು ಜನರ ಸಹಿ ಸಲ್ಲಿಸಲಾಗಿದೆ. ಆಗ, ಸಹಿಗಳನ್ನು ತಿರಸ್ಕರಿಸಿ ಶಿಕ್ಷಣವು ಸರ್ಕಾರದ ಜವಾಬ್ದಾರಿಯಲ್ಲ ಎಂಬ ಜನವಿರೋಧಿ ಮಾತನಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಲೇಜನ್ನು ಉಳಿಸಲೇಬೇಕೆಂದು ಯುಬಿಡಿಟಿ ವಿದ್ಯಾರ್ಥಿಗಳು ಟೊಂಕಕಟ್ಟಿ ನಿಂತಿದ್ದಾರೆ. ಅವರು ದಾವಣಗೆರೆಯ ಜನರಿಗೆ ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಅ.16ರಂದು ಸ್ವಘೋಷಿತ ಬಂದ್‌ಗೂ ಕರೆ ನೀಡಲಾಗಿದೆ ಎಂದರು.
ರಾಜ್ಯದ ಎಲ್ಲ ವಿದ್ಯಾರ್ಥಿಗಳು ಈ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ. ದಾವಣಗೆರೆ ಜನತೆ ದಾವಣಗೆರೆ ಬಂದ್ ಯಶಸ್ವಿಗೊಳಿಸಲು ಸಹಕರಿಸಬೇಕು. ಮುಂಬರುವ ಪೀಳಿಗೆಗಾಗಿ ಈ ಕಾಲೇಜನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಹೆಗಲೇರಿದೆ. ಆಟೋ ಚಾಲಕರು, ಬೀದಿಬದಿ ಹಾಗೂ ಅಂಗಡಿ ವ್ಯಾಪಾರಸ್ಥರು, ಮಳಿಗೆಗಳು, ವಾಹನ ಚಾಲಕರು, ಸಾಮಾನ್ಯ ಜನರೆಲ್ಲರನ್ನು ಒಳಗೊಂಡಂತೆ ದಾವಣಗೆರೆಯ ಇಡೀ ಜನತೆ ಈ ಹೋರಾಟದಲ್ಲಿ ಕೈ ಜೋಡಿಸಿ ಸಹಾಯ, ಸಹಕಾರ, ದೇಣಿಗೆ ನೀಡುವಂತೆ ಮಹಾಂತೇಶ ಬೀಳೂರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಅಭಿಷೇಕ್, ರೋಹಿತ್, ಗೌತಮ್, ಪೂಜಾ ನಂದಿಹಳ್ಳಿ, ಟಿ.ಎಸ್. ಸುಮನ್, ಅಖಿಲೇಶ್, ಜೀವನ್ ಇದ್ದರು.
- - - -7ಕೆಡಿವಿಜಿ33ಃ:ಯುಬಿಡಿಟಿ ಕಾಲೇಜು ಉಳಿಸಲು ದಾವಣಗೆರೆ ಬಂದ್ ಕರೆ ನೀಡಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಬೀಳೂರು ಮಾಹಿತಿ ನೀಡಿ, ಪೋಸ್ಟರ್ ಬಿಡುಗಡೆಗೊಳಿಸಿದರು.