ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರವಾದಿಗಳ ರಣಹೇಡಿ ಕೃತ್ಯವನ್ನು ವಿರೋಧಿಸಿದ ಹಿಂದೂ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಕರೆ ನೀಡಿದ್ದ ತಿಪಟೂರು ಬಂದ್ ಸಂಪೂರ್ಣ ಯಶಸ್ವಿಯಾಯಿತು.ಹಿಂದೂ ಪರ ಸಂಘಟನೆಗಳ ಮುಖಂಡರುಗಳು ನಗರದ ಕೆಂಪಮ್ಮದೇವಿ ದೇವಸ್ಥಾನದಿಂದ ಸಿಂಗ್ರಿ ನಂಜಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಪಾಕಿಸ್ತಾನದ ಬಾವುಟವನ್ನು ಸುಟ್ಟು ಉಗ್ರಗಾಮಿಗಳ ವಿರುದ್ದ ಧಿಕ್ಕಾರ ಕೂಗುತ್ತ ಆಕ್ರೋಶ ಹೊರಹಾಕಿದರು. ಈ ವೇಳೆ ಬಿಜೆಪಿ ಮುಖಂಡ ಲೋಕೇಶ್ವರ ಮಾತನಾಡಿ, ನಮ್ಮ ದೇಶದ ಜನರು ಸಹೋದರತ್ವ, ಬ್ರಾತೃತ್ವ ಹಾಗೂ ಸಹಿಷ್ಣತೆಯಿಂದ ಬದುಕುತ್ತಿದ್ದಾರೆ. ಆದರೆ ಪಹಲ್ಗಾಮ್‌ನಲ್ಲಿ ನೀವು ಹಿಂದೂಗಳ ಅಂತ ಕೇಳಿ ಹುಡುಕಿ ಹಿಂದೂಗಳನ್ನೇ ಹತ್ಯೆ ಮಾಡಿರುವುದು ನೀಚಕೃತ್ಯ. ಇಡೀ ದೇಶವೇ ಈ ಕೃತ್ಯದಿಂದ ಬೆಚ್ಚಿಹೋಗಿದ್ದು ಆದರೆ ನಮ್ಮ ರಾಜ್ಯದ ರಾಜಕಾರಣಿಯೊಬ್ಬರು ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎನ್ನುತ್ತಿರುವುದು ಎಷ್ಟು ಸರಿ. ಕಾಶ್ಮೀರದಲ್ಲಿ ಉಗ್ರಗಾಮಿಗಳ ನಾಶ ಮಾಡಲು ದೇಶದ ಪ್ರತಿಯೊಬ್ಬರು ಪ್ರಧಾನ ಮಂತ್ರಿ ಮೋದಿಗೆ ಬೆಂಬಲ ನೀಡಬೇಕು. ಭಯೋತ್ಪಾದಕರನ್ನು ಪೋಷಣೆ ಮಾಡಿ ಭಾರತಕ್ಕೆ ತೊಂದರೆ ನೀಡುತ್ತಿರುವ ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಉಗ್ರಗಾಮಿಗಳನ್ನು ನಾಶಗೊಳಿಸಬೇಕು. ಪ್ರತಿಯೊಬ್ಬ ಹಿಂದೂ ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಹೋರಾಟ ಮಾಡಿ ನೆರೆಯ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು. ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ಇದು ಹಿಂದೂ ಪರವಾದ ಹೋರಾಟವಾಗಿದ್ದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮತಾಂದ ಇಸ್ಲಾಮಿ ಉಗ್ರ ಗಾಮಿಗಳು ಬರೋಬರಿ 28ಕ್ಕೂ ಹೆಚ್ಚು ಹಿಂದೂಗಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಹೇಯಕೃತ್ಯ. ಈಗಾಗಲೇ ಪಾಕಿಸ್ತಾನಕ್ಕೆ ನಮ್ಮ ದೇಶದಿಂದ ಏನೇನೂ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿತ್ತೋ ಅವುಗಳನ್ನೆಲ್ಲ ಬಂದ್ ಮಾಡಲಾಗಿದೆ. ಹಿಂದೂಗಳಾದ ನಾವೆಲ್ಲರೂ ಒಂದಾಗಬೇಕು ದುಷ್ಟಶಕ್ತಿಗಳನ್ನು ಬಡಿದೋಡಿಸಬೇಕು. ಇಂತಹ ಕೃತ್ಯಗಳು ಮತ್ತೆ ಎಂದೂ ನಡೆಯದಂತೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಹಿಂದೂ ಪರ ಸಂಘಟನೆ ಮುಖಂಡ ಶ್ರೀಶಾ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿಗಳ ದಾಳಿಗೂ ಇಸ್ರೆಲ್‌ನಲ್ಲಿ ನಡೆದ ಅಮಾಸ್ ಉಗ್ರರ ದಾಳಿಗೂ ನೇರ ಸಂಬಂಧವಿದ್ದು ಈ ಉಗ್ರರು ಪಾಕಿಸ್ತಾನಕ್ಕೆ ಬಂದು ತರಬೇತಿ ಪಡೆದು ಭಾರತದಲ್ಲಿ ದಾಳಿ ನಡೆಸಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿರುವ ದೇಶದ್ರೋಹಿ ಉಗ್ರರನ್ನು ಸದೆಬಡೆಯುವ ಕಾಲ ದೂರವಿಲ್ಲ. ನಮ್ಮ ದೇಶದ ಅನ್ನ ತಿಂದು ನಮಗೇ ಮೋಸ ಮಾಡುವ ಉಗ್ರರನ್ನು ಸುಮ್ಮನೆ ಬಿಡಬಾರದು. ನೀವು ಹಿಂದೂಗಳ ಎಂದು ಕೇಳಿ ಅವರನ್ನೇ ಗುರಿಯನ್ನಾಗಿಸಿಕೊಂಡು ಕೊಂದ ಪಾಪಿಗಳನ್ನು ಕೊಲ್ಲಬೇಕು. ಹಿಂದೂಗಳು ರಾಜಕೀಯ, ಸಾಮಾಜಿಕವಾಗಿ, ಆರ್ಥಿಕವಾಗಿ ಜಾಗೃತರಾಗಿ ಒಗ್ಗಟ್ಟಾಗಬೇಕು ಎಂದರು. ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಬಂದ್‌ಗೆ ಚಾಲನೆ ನೀಡಿ ಮಾತನಾಡಿ ಕಾಶ್ಮೀರದ ಫಹಲ್ಗಾಮ್‌ನಲ್ಲಿ ತೆರಳಿದ ಪ್ರವಾಸಿಗರನ್ನು ಉಗ್ರಗಾಮಿಗಳು ಧರ್ಮ ಕೇಳಿ ಹತ್ಯೆ ಮಾಡಿರುವುದು ಖಂಡನೀಯ. ಇದು ಮಾನವ ಕುಲಕ್ಕೆ ಅವಮಾನ. ಅಮಾಯಕರನ್ನು ಕೊಂದಂತಹ ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ದೇಶದ ಎಲ್ಲಾ ಹಿಂದೂ ಸಂಘಟನೆಗಳು ಒಗ್ಗಟ್ಟಾಗಬೇಕು ಎಂದರು. ನಂತರ ಉಪವಿಭಾಗಾಧಿಕಾರಿ ಸಪ್ತಶ್ರೀ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಡಾ. ಶ್ರೀಧರ್, ಡಾ. ವಿವೇಚನ್, ನಗರಸಭೆ ಸದಸ್ಯರಾದ ರಾಮ್‌ಮೋಹನ್, ಶಶಿಕಿರಣ್, ಸಂಗಮೇಶ್, ಮಾಜಿ ಸದಸ್ಯ ಪ್ರಸನ್ನಕುಮಾರ್, ಹಿಂದೂಪರ ಸಂಘಟನೆಗಳ ಮುಖಂಡರಾದ ಬಾಗೆಪಲ್ಲಿ ನಟರಾಜು, ಮಡೆನೂರು ವಿನಯ್, ತರಕಾರಿ ಗಂಗಾಧರ್, ಶಿವಸ್ವಾಮಿ, ಸುದರ್ಶನ್, ಎಂ. ಚಿದಾನಂದ್, ಬಿಸ್ಲೇಹಳ್ಳಿ ಜಗದೀಶ್, ಗಾಡಿ ಮಂಜು, ಪರಮೇಶ್, ಭವಾನಿ ಶಂಕರ್, ಆನಂದ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.