ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರ ಶ್ರೀಗಳ ನಿಧನಾನಂತರ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಾನೇಶ್ವರ ಮಕ್ಕಳ ಪರವಾಗಿ ಬನಹಟ್ಟಿಯ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಧಾರವಾಡ ಪೀಠ ಎತ್ತಿ ಹಿಡಿದಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರ ಶ್ರೀಗಳ ನಿಧನಾನಂತರ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಾನೇಶ್ವರ ಮಕ್ಕಳ ಪರವಾಗಿ ಬನಹಟ್ಟಿಯ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಧಾರವಾಡ ಪೀಠ ಎತ್ತಿ ಹಿಡಿದಿದೆ.ದಾಸೋಹರತ್ನ ಅನ್ನದಾನೇಶ್ವರರು ಎಂದೇ ಖ್ಯಾತರಾಗಿದ್ದ ದಾನೇಶ್ವರ ಶ್ರೀಗಳು ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಈಚೆಗೆ ನಿಧನರಾಗಿದ್ದರು. ಅವರ ನಿಧನಾನಂತರ ಅವರ ಮಕ್ಕಳು ಆಸ್ತಿ ವಾರಸುದಾರಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದನ್ನು ಪ್ರಶ್ನಿಸಿ ಅಥಣಿ ತಾಲೂಕಿನ ಸವದಿ ಸಂಸ್ಥೆಯೊಂದು ತಕರಾರು ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬನಹಟ್ಟಿ ನ್ಯಾಯಾಲಯ ಮಠದ ಸಂಪೂರ್ಣ ಆಸ್ತಿ ಶ್ರೀಗಳ ಮಕ್ಕಳಿಗೆ ಸೇರುತ್ತದೆ ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಅರ್ಜಿದಾರರು ಧಾರವಾಡ ಹೈಕೋರ್ಟ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ಕೈಗೊಂಡಿದ್ದ ಧಾರವಾಡ ಹೈಕೋರ್ಟ್ ಪೀಠ ಬನಹಟ್ಟಿ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಫೆ.2ರಂದು ತೀರ್ಪು ನೀಡಿದೆ.
ಶ್ರೀಗಳ ಮಕ್ಕಳ ಪರ ನ್ಯಾಯವಾದಿ ಬನಹಟ್ಟಿಯ ಬಸವರಾಜ ಪುಟಾಣಿ ವಕಾಲತ್ತು ವಹಿಸಿದ್ದರು. ದಾನಯ್ಯ ಮಠದ ಅಂದರೆ ದಾನೇಶ್ವರ ಶ್ರೀಗಳ ಹೆಸರಿನಲ್ಲಿ ಬಾಗಲಕೋಟೆ, ಬೆಳಗಾವಿ, ಧಾರವಾಡ ಜಿಲ್ಲೆಯ ಹಲವು ಕಡೆ ಸುಮಾರು 150ಕ್ಕೂ ಅಧಿಕ ಎಕರೆ ಜಮೀನು ಹಾಗೂ ಶಿಕ್ಷಣ ಸಂಸ್ಥೆ, ಶಾಲೆಗಳು ಕಾರ್ಯನಿರ್ವಹಿಸುತ್ತವೆ.