ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ನಿಧನಾನಂತರ ಮಠದ ವ್ಯಾಜ್ಯಗಳು ನ್ಯಾಯಾಲಯ ಮೆಟ್ಟಿಲೇರಿವೆ. ಭಕ್ತ ಸಮೂಹ ವದಂತಿಗೆ ಕಿವಿಗೊಡದೆ. ಗೊಂದಲಕ್ಕೀಡಾಗಬಾರದೆಂದು ಸ್ವಾಮೀಜಿ ಪುತ್ರ ಶಿವಕುಮಾರ ದಾನಯ್ಯ ಮಠದ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ನಿಧನಾನಂತರ ಮಠದ ವ್ಯಾಜ್ಯಗಳು ನ್ಯಾಯಾಲಯ ಮೆಟ್ಟಿಲೇರಿವೆ. ಭಕ್ತ ಸಮೂಹ ವದಂತಿಗೆ ಕಿವಿಗೊಡದೆ. ಗೊಂದಲಕ್ಕೀಡಾಗಬಾರದೆಂದು ಸ್ವಾಮೀಜಿ ಪುತ್ರ ಶಿವಕುಮಾರ ದಾನಯ್ಯ ಮಠದ ಮನವಿ ಮಾಡಿದರು.

ಬನಹಟ್ಟಿಯ ವಿಶ್ರಾಂತಿ ಧಾಮದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀಗಳ ನಿಧನಾನಂತರ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಭಕ್ತರ ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿರುವುದನ್ನು ಖಂಡಿಸುತ್ತೇವೆ. ಶ್ರೀಗಳೇ ಜೀವಿತಾವಧಿಯಲ್ಲಿ ತಿಳಿಸಿರುವಂತೆ ಬಂಡಿಗಣಿಮಠ ಸನ್ಯಾಸಿ ಮಠವಲ್ಲ. ಬದಲಾಗಿ ಸಂಸಾರಿಕ ಮಠವೆಂದು ಸ್ಪಷ್ಟನೆ ನೀಡಿದ್ದರು. ಅದರಂತೆ ಮಕ್ಕಳಾದ ನಾವೆಲ್ಲ ಸೇರಿ ನಿತ್ಯ ದಾಸೋಹ, ಸಾಮೂಹಿಕ ವಿವಾಹ, ವಿದ್ಯಾರ್ಜನೆ ಸೇರಿದಂತೆ ಬಸವಗೋಪಾಲ ನೀಲಮಾಣಿಕ ಮಠದಿಂದ ನಡೆಯುತ್ತಿರುವ ನಿರಂತರ ಧಾರ್ಮಿಕ, ಶೈಕ್ಷಣಿಕ, ದಾಸೋಹ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತೇವೆ ಎಂದು ಹೇಳಿದರು.

ಭಕ್ತರ ಆಜ್ಞೆ ಪಾಲಿಸುತ್ತೇವೆ: ಬಂಡಿಗಣಿಮಠಕ್ಕೆ ಭಕ್ತರೇ ಆಧಾರವಾಗಿದ್ದು, ಯಾವುದೇ ಕಾರಣಕ್ಕೂ ಭಕ್ತರ ಮನಸ್ಸನ್ನು ನೋಯಿಸದೆ, ಅವರ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತೇವೆಂದು ಮತ್ತೋರ್ವ ಪುತ್ರ ವಿರುಪಾಕ್ಷಯ್ಯ ಮಠದ ತಿಳಿಸಿದರು.

ಕಲ್ಯಾಣ ಕಾರ್ಯ ನಡೆಯಲಿದೆ: ಕೆಲವರು ಮಠದ ಆಸ್ತಿಯನ್ನು ಕುಟುಂಬಸ್ಥರು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಲಿದ್ದಾರೆಂಬ ಗುಲ್ಲು ಎಬ್ಬಿಸಿದ್ದು, ಯಾವ ಕಾರಣಕ್ಕೂ ಭಕ್ತರಿಂದಲೇ ನಿರ್ಮಾಣಗೊಂಡಿರುವ ಮಠವನ್ನು ವೈಯಕ್ತಿಕವಾಗಿ ಕಬಳಿಸುವ ಹುನ್ನಾರ ನಮ್ಮದಿಲ್ಲ. ಬದಲಾಗಿ ಈಗಾಗಲೇ ನಾಲ್ಕೈದು ದಶಕಗಳಿಂದ ನಡೆಯುತ್ತಿರುವ ದಾಸೋಹ ಸೇರಿದಂತೆ ಎಲ್ಲ ಕಲ್ಯಾಣ ಕಾರ್ಯಗಳು ಶ್ರೀಮಠದ ನೇತೃತ್ವದಲ್ಲಿ ಸುಸೂತ್ರವಾಗಿ ಮುನ್ನಡೆಯಲಿವೆಯೆಂದು ಶಿವಕುಮಾರ ಮಠದ ತಿಳಿಸಿದರು.

ಖೊಟ್ಟಿ ಮೃತ್ಯುಪತ್ರ ಆರೋಪ : ಕೆಲವಂದಿಷ್ಟು ಜನ ಮಠಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಖೊಟ್ಟಿ ಮೃತ್ಯುಪತ್ರ ಸೃಷ್ಟಿ ಮಾಡಿರುವುದು ತಿಳಿದು ಬಂದಿರುವ ಕಾರಣ ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಶ್ರೀಗಳ ಮುಗ್ಧತೆ ದುರುಪಯೋಗಪಡಿಸಿಕೊಂಡವರ ನೈಜತೆ ಎಲ್ಲ ಭಕ್ತರಿಗೆ ತಿಳಿಯಲಿದೆಯೆಂದು ಸ್ಪಷ್ಟಪಡಿಸಿದರು.

ಈ ಸಂದರ್ಭ ದಾನಯ್ಯ ಮಠದ, ಸೋಮಯ್ಯ, ಮಲ್ಲಯ್ಯ, ನಂದಿಕೇಶ್ವರ ಮಠದ ಹಾಗೂ ಹಲವಾರು ಭಕ್ತರು ಉಪಸ್ಥಿತರಿದ್ದರು.ಎಲ್ಲ ಶಾಖೆಗಳಲ್ಲಿ ನಿರಂತರ ಕಾರ್ಯ:

ಬಂಡಿಗಣಿ ಬಸವಗೋಪಾಲ ನೀಲಮಾಣಿಮಠಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಸೇರಿದಂತೆ ಅನೇಕ ಕಡೆಗಳಲ್ಲಿನ ೧೮-೨೦ ಶಾಖೆಗಳಿವೆ. ಎಲ್ಲ ಕಡೆಗಳಲ್ಲಿಯೂ ನಿರಂತರ ಕಾರ್ಯಗಳು ಮುನ್ನಡೆಯಲಿದ್ದು, ಭಕ್ತರು ಗೊಂದಲಕ್ಕೀಡಾಗದೆ, ದಾಸೋಹ ರತ್ನ ದಾನೇಶ್ವರ ಶ್ರೀಗಳ ಮೇಲಿಟ್ಟಿರುವ ಭಕ್ತಿಗೆ ಯಾವುದೇ ಚ್ಯುತಿ ತರುವ ಕಾರ್ಯ ಮಾಡುವುದಿಲ್ಲ. ಬದಲಾಗಿ ಮಠಗಳು ಇನ್ನಷ್ಟು ಅಭಿವೃದ್ಧಿಯತ್ತ ಸಾಗುವಲ್ಲಿ ನಾವೆಲ್ಲರೂ ಶ್ರಮಿಸುತ್ತೇವೆಂದರು.