ಸಂಭ್ರಮದ ಬಂಡಿಗೆರೆ ಮಹದೇಶ್ವರ ಜಾತ್ರೆ

| Published : Apr 17 2024, 01:24 AM IST

ಸಾರಾಂಶ

ತಾಲೂಕಿನ ಬೇಗೂರು ಗ್ರಾಮದ ಬಂಡಿಗೆರೆ ಮಹದೇಶ್ವರ ಸ್ವಾಮಿ ರಥೋತ್ಸವ ಮೂರುವರೆ ದಶಕಗಳ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.

35 ವರ್ಷಗಳ ನಂತರ ನಡೆದ ಜಾತ್ರೆ । ಸಂಭ್ರಮ ಸಡಗರದಲ್ಲಿ ಮಿಂದೆದ್ದ ಗ್ರಾಮಸ್ಥರು

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬೇಗೂರು ಗ್ರಾಮದ ಬಂಡಿಗೆರೆ ಮಹದೇಶ್ವರ ಸ್ವಾಮಿ ರಥೋತ್ಸವ ಮೂರುವರೆ ದಶಕಗಳ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.

ಬೇಗೂರು ಗ್ರಾಮದ ಹೊರ ವಲಯದ ಬಂಡಿಗೆರೆ ಮಹದೇಶ್ವರಸ್ವಾಮಿ ದೇವಾಲಯದ ಆವರಣಕ್ಕೆ ಉತ್ಸವ ಮೂರ್ತಿಗಳು ಬಂದ ನಂತರ ದೇವಾಲಯದ ಆವರಣದಲ್ಲಿ ಕೊಂಡೋತ್ಸವ ಮಂಗಳವಾರ ಬೆಳಗಿನ ಜಾವ ನಡೆಯಿತು. ಕೊಂಡೋತ್ಸವದ ನಂತರ ಬೇಗೂರು ಸೇರಿದಂತೆ ನೆರೆ ಹೊರೆ ಗ್ರಾಮದ ಭಕ್ತರು ಸರದಿ ಸಾಲಿನಲ್ಲಿ ಬಂಡಿಗೆರೆ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ಮಹದೇಶ್ವರನ ಹುಲಿವಾಹನ ಸೇವೆ ನಡೆಸಿದರು. ಮಂಗಳವಾರ ಸಂಜೆ 4ರ ಬಳಿಕ ಬಂಡಿಗೆರೆ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ನೂತನ ತೇರಿ (ರಥ) ನಲ್ಲಿ ಸಾವಿರಾರು ಭಕ್ತರ ಜಯ ಘೋಷದೊಂದಿಗೆ ತೇರನ್ನು ಎಳೆದು ಭಕ್ತರು ಸಂಭ್ರಮಿಸಿದರು.

ತಾಲೂಕಿನ ಕಮರಹಳ್ಳಿ ಗ್ರಾಮದ ಬಸವೇಶ್ವರ, ಬೆಳಚಲವಾಡಿ ಗ್ರಾಮದ ರಾಮಲಿಂಗೇಶ್ವರ ಉತ್ಸವ ಮೂರ್ತಿಗಳು ಮಹದೇಶ್ವರಸ್ವಾಮಿಯ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಜಾತ್ರೆ ನಡೆಯಿತು.

ಸಂಭ್ರಮದಲ್ಲಿ ಗ್ರಾಮಸ್ಥರು:

ಕಳೆದ ಮೂವತ್ತೈದು ವರ್ಷಗಳಿಂದ ಜರುಗದ ಬಂಡಿಗೆರೆ ಮಹದೇಶ್ವರಸ್ವಾಮಿ ಜಾತ್ರೆ ಹಿನ್ನೆಲೆ ಬೇಗೂರು ಗ್ರಾಮಸ್ಥರು ಭಕ್ತಿ ಪೂರ್ವಕವಾಗಿ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಸಿದರು. ಬೇಗೂರು ಪೊಲೀಸರು ಜಾತ್ರೆಗೆ ಬಿಗಿ ಪೊಲೀಸ್‌ ಬಂದೋ ಬಸ್ತ್‌ ಏರ್ಪಡಿಸಿದ್ದರು. ಬೇಗೂರು ಗ್ರಾಮದ ಯಜಮಾನರು, ನೆರೆ ಹೊರೆಯ ಗ್ರಾಮಸ್ಥರು ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಂಡರು.