ಬೆಂಗಳೂರು ನಗರಾದ್ಯಂತ ಮುಂಜಾನೆ ಮಳೆ : ಹಲವು ಬಡಾವಣೆ ಹಾಗೂ ಪ್ರಮುಖ ರಸ್ತೆಗಳು ಜಲಾವೃತ

| Published : Aug 13 2024, 01:15 AM IST / Updated: Aug 13 2024, 10:28 AM IST

ಸಾರಾಂಶ

ಬೆಂಗಳೂರು ನಗರಾದ್ಯಂತ ಮುಂಜಾನೆಯಿಂದ ಭರ್ಜರಿ ಮಳೆಯಾಗಿ ರಸ್ತೆಗಳೆಲ್ಲಾ ನದಿಯಂತೆ ಹರಿದು ವಾಹನ ಸವಾರರು ಪರದಾಡುವಂತಾಗಿತ್ತು.

 ಬೆಂಗಳೂರು :  ಕಳೆದ ಕೆಲದಿನಗಳಿಂದ ತಣ್ಣಗಾಗಿದ್ದ ಮಳೆ ಭಾನುವಾರ ಮಧ್ಯರಾತ್ರಿ ಭಾರೀ ಪ್ರಮಾಣದಲ್ಲಿ ಸುರಿದಿದ್ದು, ಅದರ ಪರಿಣಾಮ ಬೆಂಗಳೂರಿನ ಹಲವು ಬಡಾವಣೆ ಹಾಗೂ ಪ್ರಮುಖ ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗುವಂತಾಗಿತ್ತು.

ಮಳೆಯ ಮುನ್ಸೂಚನೆ ಇದ್ದರೂ ಚರಂಡಿ ಹಾಗೂ ರಾಜಕಾಲುವೆಗಳ ನಿರ್ವಹಣೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯವಹಿಸಿದ ಕಾರಣದಿಂದಾಗಿ, ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳು ನದಿಯಂತಾಗಿದ್ದವು. ಮಧ್ಯರಾತ್ರಿ 2 ಗಂಟೆಗೆ ಆರಂಭವಾಗಿದ್ದ ಮಳೆ ಬೆಳಗ್ಗೆ 7 ಗಂಟೆಯವರೆಗೆ ಸುರಿದಿದೆ. ಮಳೆ ನೀರು ಚರಂಡಿ, ರಾಜಕಾಲುವೆಗಳಲ್ಲಿ ಸರಾಗವಾಗಿ ಹರಿಯದ ಕಾರಣದಿಂದಾಗಿ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿಯ ರಸ್ತೆ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಜಯದೇವ ಆಸ್ಪತ್ರೆ ಜಂಕ್ಷನ್‌, ನಾಗವಾರ ರಸ್ತೆ, ಹೆಬ್ಬಾಳ ಮೇಲ್ಸೇತುವೆ ಬಳಿಯ ರಸ್ತೆಗಳು ಜಲಾವೃತವಾಗಿದ್ದವು. ಅಲ್ಲದೆ, ಹಲವು ಬಡಾವಣೆ, ಅಪಾರ್ಟ್‌ಮೆಂಟ್‌ಗಳು, ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು.

ಜನವಸತಿ ಪ್ರದೇಶದಲ್ಲಿ ಪ್ರವಾಹ:

ರಾತ್ರಿ ವೇಳೆಯಲ್ಲಿ ಏಕಾಏಕಿ ಸುರಿದ ಮಳೆಯಿಂದಾಗಿ ನಗರದ ವರ್ತೂರು, ಹೆಣ್ಣೂರು, ಅಮೃತಹಳ್ಳಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿನ ವಸತಿ ಬಡಾವಣೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಹಲವು ಅಪಾರ್ಟ್‌ಮೆಂಟ್‌ಗಳು, ಮನೆಗಳು ನೀರಿನಿಂದ ತುಂಬಿ ಹೋಗಿತ್ತು. ಕಮ್ಮಸಂದ್ರ ಬಳಿಯ ಡ್ಯಾಡಿಸ್‌ ಗಾರ್ಡನ್‌ ಲೇಔಟ್‌ ಮಳೆಯ ಕಾರಣ ದ್ವೀಪದಂತಾಗಿತ್ತು. ಇಡೀ ಬಡಾವಣೆಯಲ್ಲಿ ನೀರು ನಿಂತು ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅಲ್ಲದೆ, ರಾತ್ರಿ 3 ಗಂಟೆ ನಂತರದಿಂದ ನೀರು ತುಂಬಲು ಆರಂಭಿಸಿದ ಕಾರಣ, ಅಲ್ಲಿನ ಜನರು ಜಾಗರಣೆ ಮಾಡುವಂತಾಗಿತ್ತು. ಅಲ್ಲದೆ, ಬಡಾವಣೆಯಲ್ಲಿ ಜನರನ್ನು ಮನೆಯಿಂದ ಹೊರಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುವಂತಾಯಿತು.

ಅದೇ ರೀತಿ ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇಔಟ್‌ನಲ್ಲಿ ಮಳೆ ಅವಾಂತರದಿಂದ 20ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿತ್ತು. ಮಾರತಹಳ್ಳಿಯ ಸೋನೆಸ್ಪಾ ಸಿಲ್ವರ್ ಓಕ್‌ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ ಜಲಾವೃತವಾಗಿತ್ತು. ಕುಂದಲಹಳ್ಳಿ ಗೇಟ್‌ ಬಳಿ ರಾಜಕಾಲುವೆಯಿಂದ ನೀರು ಉಕ್ಕಿ ರಸ್ತೆ ಹಾಗೂ ಬಡಾವಣೆಗೆ ಹರಿದಿತ್ತು. ಅದರಿಂದ ರಾಜಕಾಲುವೆ ಸುತ್ತಮುತ್ತಲಿನ 2 ಕಿ.ಮೀ. ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಬೆಳಗ್ಗೆ 10 ಗಂಟೆಯಾದರೂ ನೀರಿನ ಪ್ರಮಾಣ ಕಡಿಮೆಯಾಗದ ಕಾರಣ, ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿತ್ತು.

ಕಿಮೀಗಟ್ಟಲೆ ಸಂಚಾರ ದಟ್ಟಣೆ

ಜಯದೇವ ಆಸ್ಪತ್ರೆ ಜಂಕ್ಷನ್‌ ಬಳಿ 3 ಅಡಿಗೂ ಹೆಚ್ಚಿನ ಎತ್ತರಕ್ಕೆ ನೀರು ನಿಂತಿತ್ತು. ಅದರ ಪರಿಣಾಮ ವಾಹನಗಳು ಓಡಾಡಲೂ ಆಗದಂತಾಗಿತ್ತು. ಅಲ್ಲದೆ, ನಿಂತ ನೀರಿನಲ್ಲೇ ಸಾಹಸಪಟ್ಟು ವಾಹನ ಚಲಾಯಿಸಿದ ಪರಿಣಾಮ 10ಕ್ಕೂ ಹೆಚ್ಚಿನ ಬೈಕ್‌ಗಳು ಕೆಟ್ಟು ನಿಲ್ಲುವಂತಾಗಿತ್ತು. ವಾಹನ ಸಂಚಾರ ಮಾಡಲಾಗದ ಕಾರಣ ಈ ಭಾಗದಲ್ಲಿ 3 ಕಿಮೀಗೂ ಹೆಚ್ಚಿನ ಉದ್ದ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೆ, ಕಚೇರಿಗೆ ತೆರಳುವವರು, ಶಾಲೆಗೆ ತೆರಳುವ ಮಕ್ಕಳಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು.

ಅಲ್ಲದೆ ಹೊರವರ್ತುಲ ರಸ್ತೆಯಲ್ಲೂ ಮಳೆಯ ಕಾರಣ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಳಗ್ಗೆ 10 ಗಂಟೆ ನಂತರವೂ ದೊಡ್ಡನೆಕುಂದಿಯಿಂದ ಬೆಳ್ಳಂದೂರುವರೆಗೆ ವಾಹನಗಳು ನಿಂತಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.ರಾಜಕಾಲುವೆಗೆ ಬಿದ್ದ ಕಾರು, ರಸ್ತೇಲಿ ಮೀನುಗಳ ಈಜಾಟ

ಹೆಬ್ಬಾಳ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ನಾಗವಾರ ರಸ್ತೆ, ವರ್ತೂರು-ಪಣತ್ತೂರು ಮುಖ್ಯರಸ್ತೆ, ಹೆಣ್ಣೂರು ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಅದರಲ್ಲೂ ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಬಳಿ ಮಳೆ ನೀರು ತುಂಬಿದ ಕಾರಣ ರಾಜಕಾಲುವೆಗೆ ಕಾರು ಬಿದ್ದಿತ್ತು. ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿದರು. ಅಲ್ಲದೆ, ಮೀನುಗಳು ರಸ್ತೆಯಲ್ಲಿ ಈಜಾಡುವ ದೃಶ್ಯ ಕಂಡು ಬಂದಿತು. ಮಳೆ ನೀರು ನಿಂತಿದ್ದ ಕಾರಣದಿಂದಾಗಿ ಈ ಭಾಗದಲ್ಲೂ ಬೆಳಗಿನ ಹೊತ್ತು ಭಾರೀ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು.

ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಮುಂಭಾಗ ರಸ್ತೆಯೂ ಜಲಾವೃತವಾಗಿತ್ತು. 2 ಅಡಿಗಳಷ್ಟು ನೀರು ನಿಂತಿತ್ತು. ಕೆ.ಆರ್‌.ಮಾರುಕಟ್ಟೆ ರಸ್ತೆ ಕೆಸರುಗದ್ದೆಯಾಗಿ ಸೃಷ್ಟಿಯಾಗಿತ್ತು. ಈ ಕಾರಣದಿಂದಾಗಿ ಚಿಕ್ಕಪೇಟೆ ಹಾಗೂ ಕೆ.ಆರ್‌. ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗುವಂತಾಗಿತ್ತು.

ಒಣಗಿದ ರೆಂಬೆ ಬಿದ್ದು 6 ಮಂದಿಗೆ ಗಾಯ

ಮಾರುತಿಸೇವಾ ನಗರದಲ್ಲಿ ಚಲಿಸುತ್ತಿದ್ದ ಎರಡು ಸ್ಕೂಟರ್‌ಗಳ ಮೇಲೆ ಒಣಗಿದ ರೆಂಬೆ ಬಿದ್ದ ಪರಿಣಾಮ ನಾಲ್ಕು ಮಕ್ಕಳೂ ಸೇರಿದಂತೆ ಆರು ಮಂದಿಗೆ ಗಾಯಗಳಾಗಿವೆ. ಅದರಲ್ಲಿ ಮಕ್ಕಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದರೆ, ಸ್ಕೂಟರ್‌ ಚಲಾಯಿಸುತ್ತಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ಜಯಜವಾನ್‌ ನಗರ ನಿವಾಸಿ ಮಾಣಿಕ್ಯ ವೇಲು ಅವರ ಪಕ್ಕೆಲಬು ಮುರಿದಿದ್ದು, ಬೆನ್ನುಮೂಳೆಗೂ ಪೆಟ್ಟಾಗಿದೆ. ಹಾಗೆಯೇ, ಸುಬ್ಬಣ್ಣಪಾಳ್ಯ ನಿವಾಸಿ ವಿಶಾಲಾಕ್ಷಿ ಅವರಿಗೆ ಬಲಗಾಲಿನ ತೊಡೆ ಭಾಗದ ಮೂಳೆ ಮುರಿದಿದೆ. ಉಳಿದಂತೆ ಮಕ್ಕಳಾದ ತನಿಷ್ಕಾ, ಪ್ರಣಿತಾ, ಎಂ.ಹರಿಣಿ, ಭವಧರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರ ಗಾಯಗಳಾಗಿರುವ ಮಾಣಿಕ್ಯ ವೇಲು ಮತ್ತು ವಿಶಾಲಾಕ್ಷಿ ಅವರನ್ನು ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯಗಳಾಗಿರುವ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.

52 ಮರ-ರೆಂಬೆಗಳು ಧರೆಗೆ

ಮಳೆ ಜತೆಗೆ ಭಾರೀ ಗಾಳಿ ಬೀಸಿದ ಪರಿಣಾಮ ಭಾನುವಾರ ರಾತ್ರಿಯ ಮಳೆಯ 52 ಮರ ಮತ್ತು ರೆಂಬೆಗಳು ಬಿದ್ದಿವೆ. ಅದರಲ್ಲಿ 21 ಮರಗಳಾಗಿದ್ದರೆ, ಉಳಿದ 31 ಭಾರೀ ಗಾತ್ರದ ರೆಂಬೆಗಳಾಗಿವೆ.

ಮಳೆ ಅನಾಹುತಗಳು

*ಕಾಕ್ಸ್‌ಟೌನ್‌ ಸರ್ಕಾರಿ ಶಾಲೆಗೆ ನುಗ್ಗಿದ ನೀರು

*ಎಚ್‌ಬಿಆರ್‌ ಲೇಔಟ್‌ನ 5ನೇ ಬ್ಲಾಕ್‌ಗೆ ಹರಿದ ರಾಜಕಾಲುವೆ ನೀರು

*ಜಲಾವೃತವಾದ ಕೆಆರ್‌ ಮಾರುಕಟ್ಟೆ ತಳಮಹಡಿ

*ಭುವನೇಶ್ವರಿನಗರ ಮತ್ತು ಮುನಿಸ್ವಾಮಪ್ಪ ಲೇಔಟ್‌ನ ಮನೆಗಳಿಗೆ ನುಗ್ಗಿದ ನೀರು

*ತೂಬರಹಳ್ಳಿ ಬಳಿಯ ಮನೆಯ ಕಾಂಪೌಂಡ್‌ ಗೋಡೆ ಕುಸಿತ

74 ಮಿ.ಮೀ. ಮಳೆ

ಹವಾಮಾನ ಇಲಾಖೆ ಮಾಹಿತಿಯಂತೆ ಸೋಮವಾರ ಬೆಳಗ್ಗೆ 8.30ರವರೆಗೆ ಬೆಂಗಳೂರು ನಗರದಾದ್ಯಂತ 74 ಮಿ.ಮೀ. ಮಳೆ ಸುರಿದಿರುವ ವರದಿಯಾಗಿದೆ. ಅದರಲ್ಲಿ ಆನೇಕಲ್‌ ತಾಲೂಕಿನ ಮರಸೂರಿನಲ್ಲಿ 110.5 ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಬೊಮ್ಮಸಂದ್ರ 105 ಮಿಮೀ., ಕೊಡತಿ 81.5, ಚಂದಾಪುರ 78.5, ಬೇಗೂರು 72.2, ಕೊಡಿಗೇಹಳ್ಳಿ 61.5, ಶಿವಕೋಟೆ 51, ವಿವಿಪುರ 57.5, ವಿದ್ಯಾಪೀಠ 56, ನಾಯಂಡಹಳ್ಳಿ, ಕೆಆರ್‌ ಪುರ ತಲಾ 55, ಹಗದೂರು 54, ಆರ್‌ಆರ್‌ ನಗರ 53, ಅರಕೆರೆ 52.5, ಚೌಡೇಶ್ವರಿ 51.5, ಸಿಂಗನಾಯಕನಗರಹಳ್ಳಿ, ವಿ.ನಾಗೇನಹಳ್ಳಿ ತಲಾ 50.5 ಮಿಮೀ ಮಳೆ ಸುರಿದಿದೆ.