ಸಾರಾಂಶ
ಈ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ, ಅಭಿಮಾನಿಗಳ ಸಭೆ ಕರೆದು ಇದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಬೆಂಗಳೂರಿನ ಅಭಿಮಾನಿ ಸ್ಟುಡಿಯೋದಲ್ಲಿರುವ ನಟ ವಿಷ್ಣುವರ್ಧನ್ ಅವರ ಪುಣ್ಯಭೂಮಿ ಧ್ವಂಸ ಮಾಡಿರುವುದನ್ನು ಖಂಡಿಸಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದವರು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯ ವಿಷ್ಣುವರ್ಧನ್ ಉದ್ಯಾನವನ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಒಕ್ಕೂಟದ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ಇಂದು ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದೆ. ಆದರೆ, ವಿಷ್ಣು ಅಭಿಮಾನಿಗಳಿಗೆ ಇಂದು ಕರಾಳ ದಿನವಾಗಿದೆ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಧ್ವಂಸ ಮಾಡಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಆಗಿದೆ. ಈ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ, ಅಭಿಮಾನಿಗಳ ಸಭೆ ಕರೆದು ಇದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು. ಹಾಗೂ ಅಭಿಮಾನಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಅಭಿಮಾನಿಗಳಾದ ನಟರಾಜ್, ವಿನಯ್ ಕುಮಾರ್, ಎಸ್.ಎನ್. ರಾಜೇಶ್, ವಿನಯ್ ಕಣಗಾಲ್, ಬೈರತಿ ಲಿಂಗರಾಜು, ಲೋಕೇಶ್, ಮಹಾನ್ ಶ್ರೇಯಸ್, ಬಸವರಾಜ್, ಸಂತೋಷ್, ಸಿದ್ದಪ್ಪ, ಮಹದೇವ್, ಸುಚೀಂದ್ರ ಮೊದಲಾದವರು ಇದ್ದರು.