ಮುಂದಿನ ಹಂತವಾಗಿ, ಈ ರೈಲನ್ನು ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ
ಕುಷ್ಟಗಿ: ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ಅವರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರೇಶ ಬಂಗಾರಶೆಟ್ಟರ ಮಾತನಾಡಿ, ಬೆಂಗಳೂರು ಹುಬ್ಬಳ್ಳಿ ಚಲಿಸುವ ಸೂಪರ್ ಫಾಸ್ಟ್ ರೈಲನ್ನು ಗದಗ, ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಯವರೆಗೆ ವಿಸ್ತರಿಸಬೇಕು ಎಂದರು.ಗದಗ ರೈಲ್ವೆ ಹೋರಾಟ ಸಮಿತಿಯವರು ಈಗಾಗಲೇ ಆಂದೋಲನ ಪ್ರಾರಂಭಿಸಿದ್ದು, ಈ ರೈಲನ್ನು ಗದಗಕ್ಕೆ ವಿಸ್ತರಿಸುವಂತೆ ಒತ್ತಾಯಿಸಿ ಹಲವಾರು ಮನವಿ ಸಲ್ಲಿಸಿದ್ದಾರೆ. ಮುಂದಿನ ಹಂತವಾಗಿ, ಈ ರೈಲನ್ನು ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿಗೆ ವಿಸ್ತರಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಈ ಸೌಲಭ್ಯ ಕುಷ್ಟಗಿ ತಾಲೂಕು ಮಾತ್ರವಲ್ಲದೆ,ಗಜೇಂದ್ರಗಡ, ಇಲಕಲ್, ಯಲಬುರ್ಗಾ, ಕುಕನೂರು ಮತ್ತು ಗದಗ ಜಿಲ್ಲೆಯ ಜನರಿಗೂ ಪ್ರಯೋಜನ ನೀಡುತ್ತದೆ. ಇದು ವೈದ್ಯಕೀಯ ಅಗತ್ಯ, ಹೈಕೋರ್ಟ್, ಶಿಕ್ಷಣ ಮತ್ತು ವ್ಯವಹಾರಕ್ಕೆ ಅನುಕೂಲಕರವಾಗಲಿದೆ ಕಾರ್ಮಿಕರಿಗೂ ಇದು ಪ್ರಯೋಜನ ನೀಡುತ್ತದೆ ಎಂದರು.ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್‌ಗಳಿಂದ ಅಕ್ರಮವಾಗಿ ಅಧಿಕ ಶುಲ್ಕ ವಿಧಿಸುವುದನ್ನು ಇದು ತಡೆಯುತ್ತದೆ. ಬೆಂಗಳೂರು-ಹುಬ್ಬಳ್ಳಿ ರೈಲನ್ನು ಗದಗ ಮೂಲಕ ಕುಷ್ಟಗಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಪ್ರತಿ ದಿನ ಪ್ರಯಾಣಿಸುವ ಜನರಿಗೆ ಸಹಕಾರಿಯಾಗಲಿದೆ ಎಂದರು.
ಕಳೆದ ವರ್ಷ ಮೇ 15ರಂದು ಗದಗ-ವಾಡಿ ರೈಲ್ವೆ ಯೋಜನೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಪರ್ಕ ಸಕ್ರಿಯಗೊಳಿಸಿದ ನಂತರ, ಕುಷ್ಟಗಿ-ಬೆಂಗಳೂರು ಸಂಪರ್ಕದ ಬೇಡಿಕೆ ಬಲವಾಗಿ ಕೇಳಿಬರುತ್ತಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಕುಷ್ಟಗಿಗೆ ರೈಲು ಸೇವೆ ಆರಂಭವಾಗಿ ವರ್ಷ ಕಳೆದರೂ ಮತ್ತೊಂದು ರೈಲು ಸಂಪರ್ಕ ಪಡೆಯುವ ಕನಸು ಇನ್ನೂ ನನಸಾಗಿಲ್ಲ ಎಂದರು.ಕುಷ್ಟಗಿಯಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು ಚಲಿಸುತ್ತದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ನಿಲ್ದಾಣ ಬೆಳಗ್ಗೆ 6-7 ಮತ್ತು ರಾತ್ರಿ 8-9 ರವರೆಗೆ ಮಾತ್ರ ಪ್ರಯಾಣಿಕರು ಇರುತ್ತಿದ್ದು ಉಳಿದ ಸಮಯಗಳಲ್ಲಿ ನಿರ್ಜನ ಪ್ರದೇಶವಾಗಿರುತ್ತದೆ. ಆದ್ದರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ಮತ್ತೊಂದು ರೈಲು ಮತ್ತು ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಪರ್ಕದ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಈ ಕುರಿತು ಈಗಾಗಲೆ ಸಂಬಂಧಿಸಿದ ಸಚಿವರಿಗೆ ಹಾಗೂ ಸಂಸದರಿಗೂ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಶ್ರೀಧರ ಘೋರ್ಪಡೆ, ಮಂಜುನಾಥ ಮಹಾಲಿಂಗಪೂರ, ಬಸವರಾಜ ಸಾಲಿಮಠ ಸೇರಿದಂತೆ ಅನೇಕರು ಇದ್ದರು.
ರೈಲು ನಿಲ್ದಾಣದಲ್ಲಿ ಮೂಲಸೌಲಭ್ಯಕ್ಕೆ ಒತ್ತಾಯಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ, ಕಳ್ಳತನ ಪ್ರಕರಣಗಳ ತಡೆಗೆ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಬೇಕಿದೆ, ರೈಲ್ವೆ ಪೊಲೀಸರನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ, ನಿರಂತರ ವಿದ್ಯುತ್ ಒದಗಿಸುವುದು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 7 ಗಂಟೆಗೆ ರೈಲು ಓಡಿಸಬೇಕಿದೆ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲನೆ ಪ್ಲಾಟ್ ಫಾರಂಗೆ ನಿಲ್ಲುವಂತೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.
ಕುಷ್ಟಗಿ ಬೆಂಗಳೂರು ರೈಲು ಸೇವೆ ಹಾಗೂ ಕುಷ್ಟಗಿ ಹುಬ್ಬಳ್ಳಿ ಇನ್ನೊಂದು ರೈಲು ಸೇವೆ ಜತೆಗೆ ಕುಷ್ಟಗಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಕುರಿತು ಕೊಪ್ಪಳ ಸಂಸದರು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ತುರ್ತು ಸಭೆ ಮಾಡಿ ಸಾಧಕ ಭಾಧಕ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಬೇಲಾಮೀನಾ ತಿಳಿಸಿದ್ದಾರೆ.