ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಏ.1ರ ಮಧ್ಯರಾತ್ರಿ ಅದ್ಧೂರಿಯಾಗಿ ಜರುಗಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಏ.1ರ ಮಧ್ಯರಾತ್ರಿ ಅದ್ಧೂರಿಯಾಗಿ ಜರುಗಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಶುಕ್ರವಾರ ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವರು, ಈ ಬಾರಿಯ ಉತ್ಸವವು ಮೈಸೂರು ದಸರಾ ಮಾದರಿಯಲ್ಲಿ ವೈಭವದಿಂದ ಜರುಗಲಿದೆ. ಮಾ.24ರಂದು ಧ್ವಜಾರೋಹಣದ ಮೂಲಕ 11 ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಮೈಸೂರು ದಸರಾ ಮಾದರಿಯಲ್ಲಿ ಹಡ್ಸನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ ಎಂದರು.

ಉತ್ಸವದ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸೂಕ್ತ ಸ್ಥಳಾವಕಾಶ ನಿಗದಿಪಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕರಗ ಉತ್ಸವದ ಯಶಸ್ವಿ ನಿರ್ವಹಣೆಗಾಗಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ದೇವಾಲಯದ ಒಳಗಿನ ಕಾರ್ಯಚಟುವಟಿಕೆಗಳನ್ನು ಮುಜರಾಯಿ ಇಲಾಖೆ ನೋಡಿಕೊಳ್ಳಲಿದೆ. ದೇವಾಲಯದ ಹೊರಗಿನ ಸಿದ್ಧತೆ, ದೀಪಾಲಂಕಾರ ಮತ್ತು ಟೆಂಡರ್ ಪ್ರಕ್ರಿಯೆಗಳನ್ನು ಜಿಬಿಎ ವತಿಯಿಂದ ನಿರ್ವಹಿಸಲಾಗುತ್ತದೆ. ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಚೋಳನ್ ಅವರು ಈ ಎಲ್ಲ ಕೆಲಸಗಳ ಉಸ್ತುವಾರಿ ವಹಿಸಲಿದ್ದಾರೆ.

ನೂತನ ವ್ಯವಸ್ಥಾಪನಾ ಸಮಿತಿ ರಚನೆ

ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಚಲಕೆರೆ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಅರ್ಚಕರಾಗಿ ಎ. ಜ್ಞಾನೇಂದ್ರ, ಸಮಿತಿ ಸದಸ್ಯರಾಗಿ ವಸಂತ, ವಿಜಯಾ, ಎಂ. ವೆಂಕಟೇಶ್, ಅಮಿತ್, ಕಿರಣ್ ಮತ್ತು ಆರ್. ಸಂತೋಷ್ ನೇಮಕಗೊಂಡಿದ್ದಾರೆ.

ಯಶಸ್ವಿಯಾಗಿ 15ನೇ ಬಾರಿ ಕರಗ ಹೊತ್ತಿದ್ದ ಅರ್ಚಕ ಎ. ಜ್ಞಾನೇಂದ್ರ ಸ್ವಾಮಿ ಅವರೇ ಈ ಬಾರಿಯೂ ಬೆಂಗಳೂರು ಕರಗ ಹೊರಲಿದ್ದಾರೆ. ಕರಗ ಹೊರಲಿರುವವರ ಬಗ್ಗೆ ಸಮಾಜದ ಸಮಿತಿಯವರು ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.