ಬೆಂಗಳೂರು– ಮಂಗಳೂರು ರೈಲು ಮಾರ್ಗವನ್ನು ಡಬಲ್ ಲೈನ್‌ಗೊಳಿಸುವ ಮಹತ್ವದ ಯೋಜನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿರುವುದು ಕರಾವಳಿ ಜನತೆಯಲ್ಲಿ ಹೊಸ ನಿರೀಕ್ಷೆ ಹಾಗೂ ಸಂತಸ ಮೂಡಿಸಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ.

ಬಂಟ್ವಾಳ: ಬೆಂಗಳೂರು– ಮಂಗಳೂರು ರೈಲು ಮಾರ್ಗವನ್ನು ಡಬಲ್ ಲೈನ್‌ಗೊಳಿಸುವ ಮಹತ್ವದ ಯೋಜನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿರುವುದು ಕರಾವಳಿ ಜನತೆಯಲ್ಲಿ ಹೊಸ ನಿರೀಕ್ಷೆ ಹಾಗೂ ಸಂತಸ ಮೂಡಿಸಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ.ಬೆಂಗಳೂರುದಿಂದ ಆರಂಭಗೊಂಡು ಮಂಗಳೂರು ಮೂಲಕ ಮಡಗಾಂವ್‌ವರೆಗೆ ಸಂಚರಿಸಲಿರುವ ನೂತನ ವಂದೇ ಮಾತರಂ ರೈಲಿಗೆ ಮಂಗಳೂರು ಜಂಕ್ಷನ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಚಿವರೊಂದಿಗೆ ರೈಲಿನಲ್ಲಿ ಬೆಂಗಳೂರುವರೆಗೆ ಪ್ರಯಾಣಿಸಿದರು. ಈ ವೇಳೆ ಬೆಂಗಳೂರು–ಮಂಗಳೂರು ರೈಲು ಮಾರ್ಗವನ್ನು ಡಬಲ್ ಲೈನ್‌ಗೊಳಿಸುವ ಅಗತ್ಯತೆ, ಮಾರ್ಗಮಧ್ಯೆ ಎದುರಾಗುವ ಪ್ರಾಕೃತಿಕ ಸವಾಲುಗಳು ಹಾಗೂ ಇದರಿಂದ ಕರಾವಳಿ ಭಾಗಕ್ಕೆ ಆಗುವ ಪ್ರಯೋಜನಗಳ ಕುರಿತು ಸಚಿವರಿಗೆ ಸಮಗ್ರವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಪ್ರಭಾಕರ ಪ್ರಭು ಹೇಳಿದ್ದಾರೆ.ಸಂಸದರ ಮನವಿಗೆ ಸ್ಪಂದಿಸಿದ ಸಚಿವರು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಚರ್ಚಿಸಿ, ಬೆಂಗಳೂರು–ಮಂಗಳೂರು ರೈಲು ಮಾರ್ಗವನ್ನು ಡಬಲ್ ಲೈನ್‌ಗೊಳಿಸುವ ಯೋಜನೆಯನ್ನು ಪ್ರಮುಖ ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ ಕಾರ್ಯಪ್ರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು–ಮಂಗಳೂರು ಡಬಲ್ ಲೈನ್ ಯೋಜನೆ ಕರಾವಳಿ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ನಿರಂತರವಾಗಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಸಂಪರ್ಕದಲ್ಲಿದ್ದು, ಯೋಜನೆಗೆ ಅನುಮೋದನೆ ದೊರಕಿಸಲು ಶ್ರಮಿಸಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನ ಶ್ಲಾಘನೀಯವಾಗಿದೆ. ಅವರ ಪ್ರಯತ್ನಕ್ಕೆ ಮಂಗಳೂರು ಹಾಗೂ ಕರಾವಳಿ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಪ್ರಭಾಕರ ಪ್ರಭು ತಿಳಿಸಿದ್ದಾರೆ.