ಸಾರಾಂಶ
ಯಾದಗಿರಿ ಸಮೀಪದ ಯರಗೋಳ ವ್ಯಾಪ್ತಿಯ ವೆಂಕಟೇಶ್ ನಗರ ತಾಂಡಾದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರುರನ್ನು ಬಂಜಾರಾ ಸಮಾಜದಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬಂಜಾರಾ ಸಮುದಾಯದ ಋಣವನ್ನು ನಾನು ತೀರಿಸಲಾಗದು, ನಿಮ್ಮ ಆಶೀರ್ವಾದದಿಂದ ವಿಧಾನಸೌಧದ ಮೆಟ್ಟಿಲು ಹತ್ತಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ಸಮೀಪದ ಯರಗೋಳ ವ್ಯಾಪ್ತಿಯ ವೆಂಕಟೇಶ್ ನಗರ ತಾಂಡಾದಲ್ಲಿ, 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನೆರವಿನಿಂದ ಅಲ್ಲಿಪುರ ವಾರಿತಾಂಡಾ, ಸಣ್ಣ ತಾಂಡಾ, ಹೊರುಂಚಾ ಲಾಲ್ ಸಿಂಗ್ ತಾಂಡಾ, ವೆಂಕಟೇಶ್ ನಗರ ತಾಂಡಾಗಳಿಗೆ ತಲಾ 10 ಲಕ್ಷ ರು.ಗಳ ರಸ್ತೆಗಳು, ಕ್ಯಾಸಪ್ಪನಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2 ಕೋಣೆ, ಸಿಸಿ ರಸ್ತೆ, ಚರಂಡಿ ರಸ್ತೆ, ಶುದ್ಧ ನೀರಿನ ಘಟಕ ಕಾಮಗಾರಿಗಳ ಅಡಿಗಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಂಜಾರಾ ಸಮುದಾಯದ ಜನರು ನನಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ತಾಂಡಾಗಳಲ್ಲಿ ಕಟ್ಟಿಸುವ ಸೇವಾಲಾಲ್ ಮಂದಿರಗಳ ಜವಾಬ್ದಾರಿ ನನ್ನದು. ಮತಕ್ಷೇತ್ರದ 42 ತಾಂಡಾಗಳಿಗೆ ಶಿಕ್ಷಣ, ರಸ್ತೆ, ಚರಂಡಿ ಮೂಲ ಸೌಕರ್ಯಗಳಿಗೆ ಅನುದಾನ ನೀಡಿದ್ದೇನೆ. ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿ, ಅವರು ನಿಮಗೆ ಮನೆ ಕಟ್ಟಿಕೊಡುತ್ತಾರೆ, ಬಾಲ್ಯ ವಿವಾಹ ಮಾಡುವುದು ಬೇಡ, ಅದರಿಂದ ಅಪೌಷ್ಟಿಕತೆ ಹೆಚ್ಚಾಗುತ್ತದೆ ಎಂದರು.ತಾಂಡಾ ನಿವಾಸಿಗಳು ಶಾಸಕ ಶರಣಗೌಡ ಕಂದಕೂರ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಬಂಜಾರಾ ಸಮುದಾಯದ ಗುರುಗಳಾದ ಸೇವಾಲಾಲ್ ಮಹಾರಾಜರ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ವೇದಿಕೆಯ ಮುಂಭಾಗದಲ್ಲಿ ನೆನಪುಗಳನ್ನು ಮೆಲುಕು ಹಾಕಿ ಭಾವನಾತ್ಮಕವಾಗಿ ಚಪ್ಪಾಳೆ ತಟ್ಟಿದರು.
ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣ್ ಅಧಿಕಾರಿ ಕುಮಾರ್ ಹೂಗಾರ, ಗ್ರಾಪಂ ಅಧ್ಯಕ್ಷ ವಿಠ್ಠಲ್ ಜಾದವ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೀತಾ ರಾಣಿ, ಮುಖ್ಯ ಶಿಕ್ಷಕ ಕನಕಪ್ಪ, ಬಂಜಾರ ಸಮುದಾಯದ ಯುವ ಮುಖಂಡ ಶಾಂತಪ್ಪ, ಅನಿಲ್ ಹೆಡುಗಿ ಮದ್ರಾ, ಅಜಯ ರೆಡ್ಡಿ ಯಲೇರಿ, ವಿಕ್ರಂ ಪವರ್, ಗೋಪಾಲ್ ರಾಥೋಡ್, ವೆಂಕಟೇಶ್ ಇತರರಿದ್ದರು. ಸುರೇಶ್ ಚಿನ್ನ ನಿರೂಪಿಸಿ, ವಂದಿಸಿದರು