ಹೂವಿನಹಡಗಲಿ: ಬಂಜಾರ ಜನಾಂಗವು ಆಚಾರ, ವಿಚಾರಗಳಲ್ಲಿ ವಿಶಿಷ್ಟತೆ, ಹಾಡು, ನೃತ್ಯ, ಉಡುಗೆ ತೊಡುಗೆಗಳಲ್ಲಿ ಅನನ್ಯತೆಯನ್ನು ಹೊಂದಿ ವೈವಿಧ್ಯಮಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಾಹಿತಿ, ರಾಜ್ಯ ಬರಹಗಾರರ ಸಂಘದ ಅಧ್ಯಕ್ಷ ಎಲ್.ಮಧುನಾಯ್ಕ ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಇಟ್ಟಿಗಿ ಹೋಬಳಿ ಘಟಕ ಹಾಗೂ ತಾಲೂಕು ಘಟಕ ಇಟ್ಟಿಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಉಮ್ಲಿಬಾಯಿ ಥಾವರ್ಯನಾಯ್ಕ ಸ್ಮಾರಕ ದತ್ತಿ, ಕೌಸಲ್ಯಾಬಾಯಿ ದೇವೇಂದ್ರ ನಾಯ್ಕ ಪ್ರದೀಪ ಪಲ್ಲವಿ ದತ್ತಿ ಹಾಗೂ ಲಕ್ಷ್ಮಿಬಾಯಿ ಪುರುಷೋತ್ತಮ ರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂಜಾರ ಸಂಸ್ಕೃತಿ ಹಾಗೂ ಬಂಜಾರ ಜಾನಪದ ಸಿರಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಬಂಜಾರ ಜನಾಂಗವು ವಿಶ್ವದ 144 ದೇಶದಲ್ಲಿ ವಾಸವಾಗಿದ್ದಾರೆ. ಅವರ ಮೂಲ ಭಾಷೆಯನ್ನು ಮಾತನಾಡುವ ಮೂಲಕ ಗುರುತಿಸಲ್ಪಡುತ್ತಾರೆ. ತಾಂಡಾಗಳಲ್ಲಿ ವಾಸಿಸುತ್ತ ವಿಶೇಷ ಉಡುಪಿನಿಂದ ಹಾಗೂ ವಿಶಿಷ್ಟವಾದ, ಸಂಸ್ಕೃತಿಯಿಂದ ಹೆಚ್ಚು ಆಕರ್ಷಣೀಯವಾಗಿರುವ ಜನಾಂಗವಾಗಿದೆ. ಜನನದಿಂದ ಮರಣದವರೆಗಿನ ಇವರ ಆಚರಣೆಗಳು ವಿಭಿನ್ನವಾಗಿದ್ದು, ಇಂದು ಕಣ್ಮರೆಯಾಗುತ್ತಿರುವುದು ಅತ್ಯಂತ ವಿಷಾದದ ಸಂಗತಿ ಎಂದರು.ಮುತ್ತು, ರತ್ನ, ವ್ಯಾಪಾರ, ಪಶುಸಂಗೋಪನೆಗೆ ಈ ಜನಾಂಗ ಹೆಸರಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿ ಸರ್ಕಾರದ ಸೌಲಭ್ಯಗಳ ನೆರವಿನೊಂದಿಗೆ ಶಿಕ್ಷಣ, ಉದ್ಯೋಗ ಪಡೆದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ಉಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಸಾಪ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಲು ಶ್ರಮಿಸುತ್ತಿರುವುದು ಶ್ಲಾಘನೀಯವೆಂದರು.ವಿದ್ಯಾರ್ಥಿನಿಯರಾದ ಪ್ರಕೃತಿ, ರಕ್ಷಿತಾ, ಕಾವ್ಯ ಕವನ ವಾಚಿಸಿದರು. ನಿವೃತ್ತ ಉಪ ಪ್ರಾಚಾರ್ಯ ಕೆ.ಎನ್. ಚಂದ್ರಗೌಡ, ವಸತಿ ಶಾಲೆಯ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಇಟ್ಟಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ. ವಿನಯರಾಜ ಆಚಾರ್ಯ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಕವಿತಾ ಸ್ವಾಗತಿಸಿದರು. ಶಿಕ್ಷಕ ಉಮಾಪತಿ ವಂದಿಸಿದರು. ಶಿಕ್ಷಕ ಚಂದ್ರಾನಾಯ್ಕ ನಿರೂಪಿಸಿದರು.