ಸಾರಾಂಶ
ಲಕ್ಷ್ಮೇಶ್ವರ: ಬಂಜಾರ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ಮೀಸಲಾತಿ ನೀಡುವ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಮೀಪದ ಹರದಗಟ್ಟಿ ತಾಂಡಾದಲ್ಲಿ ಸೋಮವಾರ ಆಯೋಜಿಸಿದ್ದ ಶಿರಹಟ್ಟಿ ಲೋಕಸಭಾ ಕ್ಷೇತ್ರದ ಬಂಜಾರ ಸಮಾಜದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ನಗಾರಿ ಬಾರಿಸುವ ಮೂಲಕ ಸಭೆ ಉದ್ಘಾಟಿಸಿ ಮಾತನಾಡಿದರು.ಬಂಜಾರ ಸಮುದಾಯದ ವಿಶೇಷ ಸಂಪ್ರದಾಯ ಮತ್ತು ಸಂಸ್ಕೃತಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಆಚರಿಸಿಕೊಂಡು ಬರುತ್ತಿದ್ದಾರೆ. ಬಂಜಾರ ಸಮಾಜದ ಜನರು ಭಾರತದ ತುಂಬೆಲ್ಲ ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತದೆ. ಶ್ರಮಜೀವಿಗಳಾದ ಬಂಜಾರ ಸಮಾಜದ ಜನರು ತಮ್ಮ ಆಚಾರ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಬಂಜಾರ ಸಮಾಜಕ್ಕೆ ಸಿಗಬೇಕಾದ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಂಡುವಲ್ಲಿ ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಕಾರ್ಯಕ್ಕೆ ನಿಮ್ಮೆಲ್ಲರ ಬೆಂಬಲ ಬೇಕಾಗಿದೆ. ಬಿಜೆಪಿಗೆ ನಿಮ್ಮ ಮತ ನೀಡಿ ನನಗೆ ಆಶಿರ್ವಾದ ಮಾಡಬೇಕು ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಬಂಜಾರ ಸಮುದಾವನ್ನುದ್ದೇಶಿಸಿ ಲಂಬಾಣಿ ಭಾಷೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಲಂಬಾಣಿ ಸಮಾಜದ ಶಾಸಕರನ್ನು ಮಂತ್ರಿ ಮಾಡಲಿಲ್ಲ. ಬಂಜಾರ ಸಮಾಜದ ಮಕ್ಕಳಿಗೆ ವಸತಿ ಶಾಲೆ ಹಾಗೂ ಉದ್ಯೋಗ ಸೃಷ್ಟಿಗೆ ನನ್ನ ಅವಧಿಯಲ್ಲಿ ಮಾಡುವ ಗುರಿ ಹಾಕಿಕೊಂಡಿದ್ದೇನೆ. ಈ ಎಲ್ಲ ಕಾರ್ಯಗಳು ಕೈಗೂಡಲು ಬಸವರಾಜ ಬೊಮ್ಮಾಯಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವ ಕಾರ್ಯ ನಿಮ್ಮಿಂದ ಸಾಗಬೇಕು ಎಂದು ಹೇಳಿದ ಅವರು, ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲು ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಸುನೀಲ ಮಹಾಂತಶೆಟ್ಟರ, ಪ್ರವೀಣ ಲಮಾಣಿ, ಜಾನು ಲಮಾಣಿ, ಥಾವರೆಪ್ಪ ಲಮಾಣಿ, ರುದ್ರಪ್ಪ ಲಮಾಣಿ, ಪೂರ್ಣಾಜಿ ಖರಾಟೆ, ವಿಶ್ವನಾಥ ಕಪ್ಪತ್ತನವರ, ಸಣ್ಣವೀರಪ್ಪ ಹಳ್ಳೆಪ್ಪನವರ, ಎಂ.ಎಸ್. ದೊಡ್ಡಗೌಡರ, ಟೋಪಣ್ಣ ಲಮಾಣಿ, ಶಿವಪ್ರಕಾಶ ಮಹಾಜಶೆಟ್ಟರ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಶಕ್ತಿ ಕತ್ತಿ, ಪ್ರವೀಣ ಬಾಳಿಕಾಯಿ, ಭೀಮಸಿಂಗ್ ರಾಠೋಡ, ಈಶಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ ಹಾಗೂ ೩೫ ತಾಂಡಾಗಳ ಬಂಜಾರ ಸಮಾಜದ ಜನರು ಸೇರಿದ್ದರು.