ಸಾರಾಂಶ
ಗದಗ:ಬಂಜಾರ ಸಮುದಾಯವು ಅತ್ಯಂತ ಹಿಂದುಳಿದಿದ್ದು, ಶ್ರಮಜೀವಿಗಳ ಸಮಾಜವಾಗಿದೆ. ಬಂಜಾರ ಸಮುದಾಯದ ಶ್ರೀಮಂತ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಾದರಿಯದಾಗಿದ್ದು, ಈ ಕುರಿತು ದಾಖಲೀಕರಣವಾಗಬೇಕು. ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.
ನಗರದ ಕಳಸಾಪುರ ರಸ್ತೆಯ ಶ್ರೀರಾಮ ಬಂಜಾರ ಭವನದಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಲೆಮಾರಿ ಸಮುದಾಯದವರಾದ ಬಂಜಾರ ಸಮಾಜ ಕರ್ನಾಟಕದಲ್ಲಿ ಮೊದಲ ಬಾರಿಗೆ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಸ್ಥಾಪಿಸುತ್ತಿರುವುದು ಸಂತಸ, ಹೆಮ್ಮೆಯ ಸಂಗತಿ ಎಂದರು.ಅಧ್ಯಕ್ಷತೆ ವಹಿಸಿದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ನಮ್ಮ ಬಂಜಾರ ಸಮಾಜದ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ಅಮೂಲ್ಯವಾದದ್ದು, ಅಖಂಡ ಭಾರತದಲ್ಲಿ ಒಂದೇ ಭಾಷೆ ಸಂಸ್ಕೃತಿಯೊಂದಿಗೆ ವೈಶಿಷ್ಟ್ಯ ಹೊಂದಿದೆ. ಸಮಾಜದಲ್ಲಿ ಅನೇಕ ಸಾಧಕ ಮಹನೀಯರಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕರ್ನಾಟಕ ಬಂಜಾರ ಸಾಹಿತ್ಯ ರಾಜ್ಯ ಗೌರವಾಧ್ಯಕ್ಷ ಡಾ. ಪಿ.ಕೆ. ಖಂಡೋಭಾ ಮಾತನಾಡಿ, ನಾವೆಲ್ಲ ಸಮಾಜ ಬಾಂಧವರು ಒಂದಾಗಬೇಕು. ಈ ಸಾಹಿತ್ಯ ಪರಿಷತ್ತಿನ ಪ್ರತಿಯೊಂದು ಕಾರ್ಯಕ್ರಮಗಳು ದಾಖಲೀಕರಣವಾಗಬೇಕು. ನಮ್ಮವರನ್ನು ನಾವು ಗುರುತಿಸಿ ಗೌರವಿಸಬೇಕು. ಸಮಾಜದಲ್ಲಿರುವ ಇನ್ನೊಬ್ಬರನ್ನು ಬೆಳಸುವ ಮನೋಭಾವ ಹೊಂದಬೇಕು ಎಂದರು.ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ ಜಾಧವ ಹಾಗೂ ಖಂಡೂ ಬಂಜಾರ ಅವರು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.
ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ ಜಾಧವ, ಜಿಲ್ಲಾ ಬಂಜಾರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ. ಭೀಮಸಿಂಗ್ ರಾಠೋಡ, ಸೋಮು ಲಮಾಣಿ, ಎಂ.ಕೆ. ಲಮಾಣಿ, ಸುರೇಶ ಟಿ. ರಾಠೋಡ ಹಾಗೂ ಡಾ. ಬಿ.ಎಲ್. ಚವ್ಹಾಣ ಮಾತನಾಡಿದರು.ಮಂಜಪ್ಪ ಎಲ್., ಡಿ.ಎಲ್. ನಾಯಕ, ಡಾ. ಎಲ್.ಪಿ. ನಾಯ್ಕ ಕಠಾರಿ, ಎಸ್.ವೈ. ಲಮಾಣಿ, ಕುಮಾರ ಎಲ್. ಪೂಜಾರ, ಪಾಂಡಪ್ಪ ರಾಠೋಡ, ಜಾನು ಲಮಾಣಿ, ಥಾವು ಜಾಧವ ಮುಂತಾದವರು ಇದ್ದರು.
ಕಲಾವಿದೆ ಸಾವಿತ್ರಿ ಲಮಾಣಿ ಪ್ರಾರ್ಥಿಸಿದರು. ಡಾ. ಕೃಷ್ಣ ಕಾರಬಾರಿ ಸ್ವಾಗತಿಸಿದರು. ಡಿ.ಎಸ್. ನಾಯಕ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ಆರ್. ನಾಯಕ ವಂದಿಸಿದರು. ಬಂಜಾರ ಗಾಯಕ ರಮೇಶ ಲಮಾಣಿ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಸಾವಿತ್ರಿ ಲಮಾಣಿ ಅವರ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು.